ಚನ್ನಮ್ಮನ ಕಿತ್ತೂರು: ಸ್ಥಳೀಯ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಗೆ ಆಗಮಿಸಿದ ಅಮೆರಿಕದ ಸಗಿನಾವ್ ವ್ಯಾಲಿ ವಿಶ್ವವಿದ್ಯಾಲಯ ಮತ್ತು ಕಾರ್ಲಟನ್ ಪಬ್ಲಿಕ್ ಶಾಲೆಯ ಆರು ಜನರ ತಂಡವನ್ನು ಶಾಲೆಯ ಪ್ರಾಚಾರ್ಯ ಲೆಫ್ಟಿನೆಂಟ್ ಕರ್ನಲ್ ಪ್ರಕಾಶ ನರಹರಿ ಹಾಗೂ ಸಿಬ್ಬಂದಿ ವತಿಯಿಂದ ಇತ್ತೀಚೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಶಾಲೆಗೆ ಆಗಮಿಸಿದ ತಂಡವನ್ನು ಕುಂಕುಮವಿಟ್ಟು, ಹೂಗುಚ್ಛ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದಾಗ ಅವರ ಮೊಗದಲ್ಲಿ ಮೂಡಿದ ನಗು ಇಡೀ ಪ್ರದೇಶದಲ್ಲಿ ಪಸರಿಸಿದಂತಿತ್ತು!
ಅಂತರರಾಷ್ಟ್ರೀಯ ಶೈಕ್ಷಣಿಕ ಪಾಲುದಾರಿಕೆಯನ್ನು ಹೊಂದಿರುವ ಅತಿ ವಿರಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸೈನಿಕ ಶಾಲೆಯೂ ಒಂದು.
ಈ ಶಾಲೆಯ ಜೊತೆ ಅಮೆರಿಕದ ಸಗಿನಾವ್ ವ್ಯಾಲಿ ವಿಶ್ವವಿದ್ಯಾಲಯ ಮತ್ತು ಕಾರ್ಲಟನ್ ಪಬ್ಲಿಕ್ ಶಾಲೆ ನಡುವೆ ತ್ರಿಪಕ್ಷೀಯ ಶೈಕ್ಷಣಿಕ ಒಡಂಬಡಿಕೆ ಹಿನ್ನೆಲೆಯಲ್ಲಿ ಈ ತಂಡ ಇಲ್ಲಿಗೆ ಆಗಮಿಸಿದೆ. 12 ಜೂನ್ 2008ರಲ್ಲಿ ನಡೆದ ಈ ಒಡಂಬಡಿಕೆಯಿಂದ ಎರಡು ದೇಶಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರಸ್ಪರ ಸಂಬಂಧ ಮತ್ತು ತಿಳಿವಳಿಕೆ ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಗಾರ್ಡನ್‌ರ ಥಾಮಸ್‌ನ ಅಂಬರ್‌ಗರ್, ಎಂಜಿಲಾ ಲಿನ್ ಅಂಬರ್‌ಗರ್ ಮತ್ತು ಡೇವಿಡ್ ಎಲೆನ್ ಕ್ಲಾಯನ್ ಎಂಬ ಮೂರು ಜನ ಪ್ರಾಧ್ಯಾಪಕರು ಹಾಗೂ ಮೇಘನ್ ಹೌಸವಿರ್ಥ್, ವಿಟ್ನಿ ಗಿಲ್‌ಬರ್ಟ್ ಹಾಗೂ ಕರನ್ ರೈಡರ್ ಎಂಬ ಮೂರು ಪ್ರಶಿಕ್ಷಣ ವಿದ್ಯಾರ್ಥಿನಿಯರು ಶಾಲೆಗೆ ಭೇಟಿ ನೀಡಿರುವ ತಂಡದಲ್ಲಿದ್ದಾರೆ. 15ದಿನಗಳ ಕಾಲ ಇಲ್ಲಿದ್ದು ದಿನನಿತ್ಯದ ಇಲ್ಲಿಯ ಚಟುವಟಿಕೆಗಳಲ್ಲಿ ಭಾಗವಹಿಸುವರು.
ತ್ರಿಪಕ್ಷೀಯ ಒಡಂಬಡಿಕೆಯ ಕಾರ್ಯಕ್ರಮದಂತೆ ಈ ಶಾಲೆಯ ಇಬ್ಬರು ಶಿಕ್ಷಕಿಯರು ಹಾಗೂ ನಾಲ್ಕು ಜನ ವಿದ್ಯಾರ್ಥಿನಿಯರನ್ನು ಒಳಗೊಂಡ ಐದು ತಂಡಗಳು ಅಮೆರಿಕೆಯ ಮಿಚಿಗನ್ ಸಗಿನಾವ್ ವ್ಯಾಲಿ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಭೇಟಿ ನೀಡಿ ಬಂದಿರುವುದನ್ನು ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.