ADVERTISEMENT

ಸಾಲದ ಸುಳಿಗೆ ಸಿಲುಕಿದ ನೇಕಾರರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 6:05 IST
Last Updated 24 ಸೆಪ್ಟೆಂಬರ್ 2011, 6:05 IST

ಬೆಳಗಾವಿ: ಕಡಿಮೆ ಬಡ್ಡಿ ದರದಲ್ಲಿ ನೇಕಾರರಿಗೆ ಸಾಲ ನೀಡಲಾಗುವುದು ಎಂಬ ರಾಜ್ಯ ಸರ್ಕಾರದ ಘೋಷಣೆ ನಂಬಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದ ಜಿಲ್ಲೆಯ ಸಾವಿರಾರು ನೇಕಾರ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ನೇಕಾರಿಕೆಯಲ್ಲಿ ತೊಡಗಿರುವವರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ನಾಲ್ಕು ವರ್ಷದ ಹಿಂದೆ ರಾಜ್ಯ ಸರ್ಕಾರ ಘೋಷಿಸಿತ್ತು. ಸಂಕಷ್ಟದಲ್ಲಿದ್ದ ನೇಕಾರರು, ಕಡಿಮೆ ಬಡ್ಡಿ ದರಕ್ಕೆ ಸಾಲ ಸಿಗುತ್ತದೆ. ಸಾಲ ಮಾಡಿಯಾದರೂ ಒಂದಷ್ಟು ವಹಿವಾಟು ವಿಸ್ತರಿಸಿಕೊಳ್ಳಬೇಕು ಎಂದು ಸಾಲ ಮಾಡಿದ್ದ ನೇಕಾರರು ಹೆಚ್ಚಿನ ಬಡ್ಡಿ ಕಟ್ಟಿ ಸುಸ್ತಾಗಿದ್ದಾರೆ.

ಸಾಮಾನ್ಯವಾಗಿ ಕೋ ಅಪ್ ಬ್ಯಾಂಕುಗಳಲ್ಲಿ ಶೇ 13ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಶೇ 3ರ ಬಡ್ಡಿ ದರದಲ್ಲಿ ನೇಕಾರರಿಗೆ ಸಾಲ ನೀಡಬೇಕು. ಉಳಿದ ಬಡ್ಡಿ ಹಣವನ್ನು ಸರ್ಕಾರ ಪಾವತಿ ಮಾಡಲಿದೆ ಎಂದು ತಿಳಿಸಿತು.

ಸರ್ಕಾರದ ಮಾತು ನಂಬಿದ ಜಿಲ್ಲೆಯ ಕೋ ಅಪ್ ಬ್ಯಾಂಕುಗಳು ನೇಕಾರರಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದವು. ಆದರೆ ಸರ್ಕಾರ ಮಾತ್ರ ವ್ಯತ್ಯಾಸದ ಬಡ್ಡಿ ದರದ ಹಣವನ್ನು ಬಿಡುಗಡೆ ಮಾಡಲಿಲ್ಲ. ಹೀಗಾಗಿ ಮೊದಲೇ ಕಷ್ಟ ಎದುರಿಸುತ್ತಿದ್ದ ಬ್ಯಾಂಕುಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದವು.

ಬೆಳಗಾವಿ ಇಂಡಸ್ಟ್ರಿಯಲ್ ಕೋ ಆಪ್ ಬ್ಯಾಂಕಿಗೆ 65 ಲಕ್ಷ ರೂಪಾಯಿ, ಗಾಯಿತ್ರಿ ಅರ್ಬನ್ ಕೋ ಅಪ್ ಬ್ಯಾಂಕಿಗೆ ಬಡ್ಡಿ ಮನ್ನಾ ಸೇರಿ ರೂ 32 ಲಕ್ಷ , ಬೈಲಹೊಂಗಲ ಅರ್ಬನ್ ಬ್ಯಾಂಕಿಗೆ ರೂ 20.65 ಲಕ್ಷ, ಕರ್ನಾಟಕ ಇಂಡಸ್ಟ್ರಿಯಲ್ ಕೋ ಅಪ್ ಬ್ಯಾಂಕಿಗೆ 13.50 ಲಕ್ಷ ರೂಪಾಯಿ ಬಡ್ಡಿ ವ್ಯತ್ಯಾ ಸದ ಹಣ ಬರಬೇಕಿದೆ.

ಕೆಲವು ಬ್ಯಾಂಕುಗಳಿಗೆ 2009 ರಿಂದ ಇಲ್ಲಿಯವರೆಗೆ ನೀಡಿದ ಸಾಲಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆ ಮಾಡುವಂತೆ ಬ್ಯಾಂಕುಗಳು ಪತ್ರ ವ್ಯವಹಾರ ನಡೆಸಿದ್ದೇವೆ ಎನ್ನುತ್ತಾರೆ ಬೆಳಗಾವಿ ಇಂಡಸ್ಟ್ರಿಯಲ್ ಬ್ಯಾಂಕ್ ಅಧ್ಯಕ್ಷ ಕೆ.ಎಂ. ಬಡಗಾವಿ.

ಈ ಬ್ಯಾಂಕುಗಳು ನೇಕಾರರಿಗೆ ಶೇ 13ರ ದರದಲ್ಲಿಯೇ ಸಾಲ ನೀಡಿವೆ. ಸಾಲದ ಕಂತುಗಳನ್ನು ಆ ಬಡ್ಡಿ ದರದಲ್ಲಿಯೇ ವಸೂಲು ಮಾಡುತ್ತಿವೆ. ಸರ್ಕಾರ ವ್ಯತ್ಯಾಸ ಬಡ್ಡಿ ಹಣ ಬಿಡುಗಡೆ ಮಾಡಿದರೆ ಅದನ್ನು ನೇಕಾರರ ಖಾತೆಗೆ ಸೇರಿಸಲಿವೆ. ಹೀಗಾಗಿ ಅವುಗಳ ಮೇಲೆ ಯಾವುದೇ ಒತ್ತಡವಿಲ್ಲ.

ಆದರೆ ಕಡಿಮೆ ಬಡ್ಡಿಗೆಂದು ಸಾಲ ಮಾಡಿದ್ದ ಜಿಲ್ಲೆಯ ಸಾವಿರಾರು ನೇಕಾರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕೊಂಡಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಮಾರುಕಟ್ಟೆಯ ಕುಸಿತದಿಂದ ಕಂಗಾಲಾಗಿದ್ದ ನೇಕಾರರ ಕುಟುಂಬಗಳು ಈಗ ಹೆಚ್ಚಿನ ಬಡ್ಡಿ ದರದ ಸಾಲದಿಂದ ತತ್ತರಿಸಿ ಹೋಗಿವೆ.

`ಎರಡು ವರ್ಷದಿಂದ ಹಿಂದೆ ಮಗ್ಗಕ್ಕಾಗಿ ಸಾಲ ತೆಗೆದುಕೊಂಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಬ್ಯಾಂಕಿಗೆ ಸಾಲ ತುಂಬುತ್ತಿದ್ದೇನೆ. ಈಗಾಗಲೇ ಅರ್ಧದಷ್ಟು ಸಾಲ ತೀರುವ ಹಂತಕ್ಕೆ ಬಂದಿದೆ. ಇಲ್ಲಿಯವರೆಗೂ ವ್ಯತ್ಯಾಸದ ಬಡ್ಡಿ ಹಣ ಬಂದಿಲ್ಲ. ಹೀಗಾಗಿ ಸಾಲ ನಮ್ಮನ್ನು ಶೂಲವಾಗಿ ಕಾಡುತ್ತಿದೆ~ ಎನ್ನುತ್ತಾರೆ ಬೆಳಗಾವಿಯ ನೇಕಾರ ರಾಮಚಂದ್ರಪ್ಪ ಕಾಮಕರ.

ಆರಂಭದಲ್ಲಿ ರಾಜ್ಯ ಸರ್ಕಾರವು ಸಾಲ ತೆಗೆದುಕೊಳ್ಳುವುದಕ್ಕೆ ಯಾವುದೇ ಮಿತಿ ನಿಗದಿಪಡಿಸಿರಲಿಲ್ಲ. ಅವರ ವಹಿವಾಟು, ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಬ್ಯಾಂಕುಗಳು ಸಾಲ ನೀಡಿದ್ದವು. ಈ ಹಂತದಲ್ಲಿ ಕೆಲವರು ಹೆಚ್ಚಿನ ಸಾಲ ಪಡೆದಿದ್ದಾರೆ. ಆದರೆ ಈಗ ವ್ಯತ್ಯಾಸದ ಹಣ ಬಾರದ್ದರಿಂದಾಗಿ ತೀವ್ರ ತೊಂದರೆ ಎದುರಿಸುತ್ತಿದ್ದು, ಉತ್ಪಾದನಾ ಘಟಕವನ್ನೇ ಮುಚ್ಚುವ ಸ್ಥಿತಿಗೆ ಬಂದಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ ಎನ್ನುವುದು ನೇಕಾರರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.