ADVERTISEMENT

ಸುವರ್ಣ ವಿಧಾನಸೌಧ ನಾಮಕರಣ - ಶಂಕರಮೂರ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 9:10 IST
Last Updated 4 ಅಕ್ಟೋಬರ್ 2012, 9:10 IST

ಬೆಳಗಾವಿ: “ಇದೇ ಅ. 11 ರಂದು ಲೋಕಾರ್ಪಣೆಗೊಳ್ಳಲಿರುವ ಸುವರ್ಣಸೌಧ ಕಟ್ಟಡಕ್ಕೆ ಸುವರ್ಣ ವಿಧಾನಸೌಧ ಎಂದು ಹೆಸರಿಡಬೇಕು ಎಂಬ ಬೇಡಿಕೆಗಳು ಬಂದಿವೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲಾಗುವುದು” ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

ಬುಧವಾರ ಸುವರ್ಣಸೌಧ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಾಖಲೆಯಲ್ಲಿ ಸುವರ್ಣಸೌಧ ಎಂದು ನಮೂದಾಗಿದೆ. ಸುವರ್ಣ ವಿಧಾನಸೌಧ ಎಂದು ಹೆಸರನ್ನಿಡಬೇಕು ಎಂಬುದು ಸೂಕ್ತವಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಉದ್ಘಾಟನೆಗೆ ಎಲ್ಲ ತಯಾರಿ ಮುಗಿದಿದೆ. ಅಂತಿಮ ಹಂತದ ಕೆಲಸ ನಡೆಯುತ್ತಿದ್ದು, 2-3 ದಿನಗಳಲ್ಲಿ ಮುಗಿಯಲಿದೆ. ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸುತ್ತಿರುವುದರಿಂದ ಶಿಷ್ಟಾಚಾರದಂತೆ ಸಾಂಪ್ರದಾಯಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳುವುದು ಹಾಗೂ ಒಳಗೆ ಕರೆದುಕೊಂಡು ಹೋಗುವ ಮಾರ್ಗದ ಪರಿಶೀಲನೆ ನಡೆಸಲಾಯಿತು ಎಂದು ಹೇಳಿದರು.

ರಾಷ್ಟ್ರಪತಿಗಳು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವರು. ಇದಕ್ಕೂ ಮುನ್ನ ಸುವರ್ಣಸೌಧ ಆವರಣದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡುವರು. ಡಾ. ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಈ ಸಮಾರಂಭದಲ್ಲಿಯೇ ನಡೆಸಲು ರಾಷ್ಟ್ರಪತಿ ಭವನ ಒಪ್ಪುವುದಿಲ್ಲ. ಆದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತ್ಯೇಕವಾಗಿಯೇ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜಭವನದ ಅಧಿಕಾರಿಗಳು ಸಹ ಸಭಾಪತಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಮಾಜಿ ಸಚಿವ ಶಶಿಕಾಂತ ನಾಯಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.