ADVERTISEMENT

ಸುವರ್ಣ ಸೌಧಕ್ಕೆ ಬೆಳಕಿನ ಮಜ್ಜನ!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 10:00 IST
Last Updated 11 ಅಕ್ಟೋಬರ್ 2012, 10:00 IST

ಬೆಳಗಾವಿ:  ನಗರದ ಹಲಗ-ಬಸ್ತವಾಡದಲ್ಲಿ ನಿರ್ಮಿಸಿರುವ `ಸುವರ್ಣ ಸೌಧ~ವು ಬುಧವಾರ ರಾತ್ರಿ ಬೆಳಕಿನ ಮಜ್ಜನ ಮಾಡಿತು. ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿದ್ದ ಸುವರ್ಣ ಸೌಧವು ಹೆದ್ದಾರಿ ಮೇಲೆ ಸಂಚರಿಸುತ್ತಿದ್ದವರ ಕಣ್ಣನ್ನು ಸೆರೆ ಹಿಡಿಯುತ್ತಿತ್ತು.

ಇಟಲಿ ಮೂಲದ `ಎಲ್‌ಇಡಿ ವಾಶ್ ಮೂವಿಂಗ್ ಲೈಟ್~ನಿಂದಾಗಿ ಸುವರ್ಣ ಸೌಧದ ಕಂಬಗಳು ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದವು. ಎಲ್‌ಇಡಿ ಪಾರ್ ಲೈಟ್‌ನಿಂದಾಗಿ ಸುವರ್ಣ ಸೌಧದ ಚಾವಡಿಯ ಮೇಲೆ ಬಣ್ಣ ಬಣ್ಣದ ಬೆಳಕು ಹರಡಿಕೊಂಡಿದ್ದವು. ಛಾವಡಿ ಮೂರನೇ ಹಮಡಿಯಲ್ಲಿ ಕೇಸರಿ, ಎರಡನೇ ಮಹಡಿಯಲ್ಲಿ ಬಿಳಿ ಹಾಗೂ ಒಂದನೇ ಮಹಡಿಯಲ್ಲಿ ಹಸಿರು ಬಣ್ಣದ ದೀಪ ಬೀಳುತ್ತಿದ್ದವು. ಇದರ ಮಧ್ಯದಲ್ಲಿ ರೊಬೆ ಮೂವಿಂಗ್ ಹೆಡ ಲೈಟ್ ನಿರ್ಮಿಸಿದ್ದ ಅಶೋಕ ಚಕ್ರವೂ ತಿರುಗುತ್ತಿದ್ದರಿಂದ ಸುವರ್ಣ ಸೌಧದ ಚಾವಡಿ ಮೇಲೆ ಬೆಳಕಿನಿಂದ ನಿರ್ಮಾಣಗೊಂಡಿದ್ದ ರಾಷ್ಟ್ರ ಧ್ವಜವು ಹಾರುತ್ತಿದ್ದವು.

ಸಿಟಿ ಕಲ್ ಲೈಟ್ ಇಡೀ ಕಟ್ಟಡಕ್ಕೆ ಒಂದೇ ಬಣ್ಣವನ್ನು ಹದವಾಗಿ ಲೇಪನ ಮಾಡುತ್ತಿದ್ದವು. ಎರಡು ಮೂಲೆಗಳಲ್ಲಿ ಕೂರಿಸಿರುವ 11 ಕಿ.ಮೀ. ದೂರಕ್ಕೆ ಸೂಸುವ `ಸ್ಕೈ ಟ್ರ್ಯಾಕ್~ ಲೈಟ್ ಆಕಾಶದಲ್ಲಿ ಬೆಳಕಿನ ಗೆರೆಗಳನ್ನು ಮೂಡಿಸಿದ್ದವು. ಇದನ್ನು ನೋಡಲು ಬುಧವಾರ ರಾತ್ರಿಯೇ ಜನರು ತಂಡೋಪತಂಡವಾಗಿ ಸುವರ್ಣ ಸೌಧದ ಬಳಿ ಬರುತ್ತಿದ್ದರು. ಪೊಲೀಸ್ ಸಿಬ್ಬಂದಿಜನರನ್ನು ತಡೆಯುವಲ್ಲಿ ಸಾಕು ಬೇಕಾಯಿತು. ಜನರು ತಮ್ಮ ಮೊಬೈಲ್, ಕ್ಯಾಮೆರಾದಲ್ಲಿ ಬೆಳಕಿನ ಮಜ್ಜನ ಮಾಡುತ್ತಿದ್ದ `ಸುವರ್ಣ ಸೌಧ~ವನ್ನು ಸೆರೆ ಹಿಡಿದುಕೊಳ್ಳಲು ಪೈಪೋಟಿ ನಡೆಸಿದ್ದರು.

ಗುರುವಾರ ಹಾಗೂ ಶುಕ್ರವಾರ ರಾತ್ರಿಯೂ ಸುವರ್ಣ ಸೌಧಕ್ಕೆ ಬೆಳಕಿನ ಮಜ್ಜನ ಮಾಡಿಸಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.