ADVERTISEMENT

ಸುವರ್ಣ ಸೌಧಕ್ಕೆ ವಿಮೆ: ಮನವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:45 IST
Last Updated 7 ಅಕ್ಟೋಬರ್ 2012, 9:45 IST

ಹುಬ್ಬಳ್ಳಿ: `ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಸೌಧಕ್ಕೆ ರಾಜ್ಯ ಸರ್ಕಾರ ವಿಮೆ ಮಾಡಿಸಬೇಕು~ ಎಂದು ನಗರದ ತಿಮ್ಮಸಾಗರ ಗುಡಿ ರಸ್ತೆ ನಿವಾಸಿಗಳ ಸಂಘದ ಕಾರ್ಯದರ್ಶಿ ಡಾ.ಎಂ.ಸಿ. ಸಿಂಧೂರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಕೋರಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸುವರ್ಣ ಸೌಧದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ವಿಮೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

`ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಸಂದ ಸವಿನೆನಪಿನಲ್ಲಿ ನಿರ್ಮಿಸಿರುವ ಸುವರ್ಣ ಸೌಧ, ರಾಜ್ಯದ ಮುಕುಟದಂತೆ ಗೋಚರಿಸುತ್ತಿದೆ. ಇಲ್ಲಿ ನಡೆಯುವ ಅಧಿವೇಶನಗಳಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಇತ್ಯರ್ಥಕ್ಕೆ ನೆರವಾಗಲಿದೆ. ಇಂತಹ ಸೌಧ ನಿರ್ಮಿಸಿದ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ~ ಎಂದು ಅವರು ತಿಳಿಸಿದ್ದಾರೆ.

`ರಾಜ್ಯ ಸರ್ಕಾರ ಈ ಸೌಧದ ನಿರ್ಮಾಣಕ್ಕೆ ರೂ 391 ಕೋಟಿ ವೆಚ್ಚ ಮಾಡಿದ್ದು, ಈ ಅಮೂಲ್ಯವಾದ ಸಾರ್ವಜನಿಕ ಆಸ್ತಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಬಾಹ್ಯ ಶಕ್ತಿಗಳಿಂದ ಒದಗುವ ಅಪಾಯ ಮತ್ತು ನೈಸರ್ಗಿಕ ವಿಕೋಪಗಳಿಂದ ಆಗಬಹುದಾದ ತೊಂದರೆಯಿಂದ ಈ ಸೌಧವನ್ನು ರಕ್ಷಿಸಬೇಕಾದ ಅಗತ್ಯವಿದೆ~ ಎಂದು ವಿವರಿಸಿದ್ದಾರೆ.

`ಭೂಕಂಪ, ಮಹಾಪೂರ, ಗಲಭೆ, ಅಗ್ನಿ ಅನಾಹುತ ಮೊದಲಾದ ಕಾರಣಗಳಿಂದ ಸೌಧಕ್ಕೆ ತೊಂದರೆ ಉಂಟಾದಲ್ಲಿ ವಿಮಾ ಸೌಲಭ್ಯದಿಂದ ತಕ್ಷಣ ದುರಸ್ತಿಗೊಳಿಸಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ದುರಸ್ತಿ ವೆಚ್ಚವೂ ಸರ್ಕಾರದ ಹೆಗಲ ಮೇಲೆ ಬೀಳುವುದಿಲ್ಲ. ಆದ್ದರಿಂದ ಸರ್ಕಾರ ತಡಮಾಡದೆ ಪ್ರಜಾಪ್ರಭುತ್ವದ ಈ ಭವ್ಯ ಸೌಧಕ್ಕೆ ವಿಮೆ ಮಾಡಿಸಬೇಕು~ ಎಂದು ಅವರು ಒತ್ತಾಯಿಸಿದ್ದಾರೆ.

`ಹುಬ್ಬಳ್ಳಿ ನಗರದಲ್ಲಿ  ಪಾಲಿಕೆ ಒಡೆತನದ ತಿಮ್ಮಸಾಗರ ಗುಡಿ ರಸ್ತೆಗೆ ಈ ರಸ್ತೆ ನಿವಾಸಿಗಳೇ 2007ರಿಂದ 2012ರ ಅವಧಿಗೆ ವಿಮೆ ಮಾಡಿಸಿದ್ದಾರೆ. ಸಾರ್ವಜನಿಕ ಆಸ್ತಿ ರಕ್ಷಣೆಗೆ ಈ ಕ್ರಮವನ್ನೇ ಸರ್ಕಾರವೂ ಒಂದು ಮಾದರಿಯಾಗಿ ಪರಿಗಣಿಸಬೇಕು. ಹಣಕಾಸು ಹಾಗೂ ಲೋಕೋಪಯೋಗಿ ಇಲಾಖೆಗೆ ಈ ಸಂಬಂಧ ಶೆಟ್ಟರ್ ತಕ್ಷಣ ನಿರ್ದೇಶನ ನೀಡಬೇಕು. ದುರಸ್ತಿ ವೆಚ್ಚಕ್ಕೆ ಹೋಲಿಸಿದಲ್ಲಿ ಪಾಲಿಸಿ ಮೊತ್ತ ಅತ್ಯಲ್ಪವಾದುದು~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.