ADVERTISEMENT

ಸೇತುವೆ ನಿರ್ಮಾಣಕ್ಕೆ 4.24 ಕೋಟಿ ರೂ. ಮಂಜೂರು

​ಪ್ರಜಾವಾಣಿ ವಾರ್ತೆ
Published 12 ಮೇ 2012, 7:55 IST
Last Updated 12 ಮೇ 2012, 7:55 IST

ಖಾನಾಪುರ: ಪಟ್ಟಣದಿಂದ ತಾಲ್ಲೂಕಿನ ಅಸೋಗಾ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ಅಸೋಗಾ ಸೇತುವೆ ನಿರ್ಮಾಣಕ್ಕೆ 4.24ಕೋಟಿ ಅನುದಾನ ಮಂಜೂರಾಗಿದ್ದು, ಈ ಕೆಲಸಕ್ಕಿದ್ದ ಅಡೆತಡೆಗಳು ದೂರವಾಗಿವೆ.

ಮುಂಬರುವ ಮಳೆಗಾಲದಲ್ಲಿ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡು ಮಳೆಗಾಲದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ತಿಳಿಸಿದ್ದಾರೆ.

ಶುಕ್ರವಾರ ಅಸೋಗಾ ಸೇತುವೆ ಬಳಿ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಅಸೋಗಾ ಬಳಿಯ ಮಲಪ್ರಭಾ ನದಿಗೆ ಈಗಾಗಲೇ ಇರುವ ಹಳೆಯ ಸೇತುವೆಯು ಸರಳವಾಗಿರದೇ ಅಂಕುಡೊಂಕಾಗಿದೆ. ಇದು ಕೆಳಮಟ್ಟದಲ್ಲಿ ಇರುವ ಕಾರಣ ಮಳೆಗಾಲದಲ್ಲಿ ಬೇಗನೇ ನೀರು ತುಂಬಿ ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ದುರಸ್ತಿಮಾಡುವ ಗೋಜಿಗೆ ಹೋಗದೇ ಹೊಸದಾಗಿ ನೇರವಾದ 800ಮೀ ಉದ್ದದ ಸೇತುವೆಯನ್ನು ನಿರ್ಮಿಸಲು ಇಲಾಖೆ ಹಸಿರುನಿಶಾನೆ ತೋರಿದೆ ಎಂದು ತಿಳಿಸಿದ್ದಾರೆ.

ಮೊದಲು ಈ ಸೇತುವೆ ನಿರ್ಮಾಣಕ್ಕೆ 3ಕೋಟಿ ರೂಪಾಯಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ಈ ದರದಲ್ಲಿ ಸೇತುವೆ ಕೆಲಸ ಎತ್ತಿಕೊಳ್ಳಲು ಯಾವ ಗುತ್ತಿಗೆದಾರರೂ ಮುಂದೆ ಬಾರದ ಕಾರಣ ಈ ಕೆಲಸ ವಿಳಂಬವಾಯಿತು. ಮತ್ತೆ ಈ ಕೆಲಸದ ಅಂದಾಜು ವೆಚ್ಚವನ್ನು ಪರಿಷ್ಕರಿಸಲು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು.

ಇದೀಗ ಈ ಸೇತುವೆಗೆ 4.24ಕೋಟಿ ದರ ನಿಗದಿಪಡಿಸಿದ ಕಾರಣ ಗುತ್ತಿಗೆ ಪ್ರಕ್ರಿಯೆಯೂ ಸುಗಮವಾಗಿ ಮುಗಿದು ಕೆಲಸ ಪ್ರಾರಂಭವಾಗಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಮಹಾದೇವ ಪಾಟೀಲ ಮಾತನಾಡಿ, ಅಸೋಗಾ ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ತುಂಬುತ್ತಿದ್ದ ಕಾರಣ ಇಲ್ಲಿಂದ ಖಾನಾಪುರ ಸಂಪರ್ಕಿಸಲು ಬೇರೆ ಮಾರ್ಗವಿಲ್ಲದೇ ತೀವ್ರ ತೊಂದರೆಯಾಗುತ್ತಿತ್ತು. ಅಸೋಗಾ ಗ್ರಾಮದಿಂದ ಹೊರಜಗತ್ತಿಗೆ ಸಂಪರ್ಕ ಕಲ್ಪಿಸಲು ಈ ಸೇತುವೆಯೊಂದೇ ಆಧಾರವಾದ ಕಾರಣ ಇದು ತುಂಬಿದಾಗ ಅಸೋಗಾ ನಡುಗಡ್ಡೆಯಾಗಿ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಿತ್ತು.
 
ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಅಪಘಾತಗಳು ಸಂಭವಿಸಿ ಹತ್ತಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಹೊಸ ಸೇತುವೆ ನಿರ್ಮಾಣ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದ್ದು, ಇದರಿಂದ ಗ್ರಾಮಸ್ಥರಿಗೆ ಸಂತೋಷವಾಗಿದೆ ಎಂದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.