ಬೆಳಗಾವಿ: ಈಚೆಗೆ ನಗರದಲ್ಲಿ ಅದ್ದೂರಿಯಾಗಿ ನಡೆದ ವಿಶ್ವ ಕನ್ನಡ ಸಮ್ಮೇಳನ ಸ್ಪಷ್ಟ ಸಂದೇಶವಿಲ್ಲದೇ ಕೊನೆಗೊಂಡಿತು ಎಂದು ಮಾಜಿ ಮೇಯರ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಪಾಟೀಲ ಶುಕ್ರವಾರ ಇಲ್ಲಿ ಟೀಕಿಸಿದರು.ಮೂರು ದಿನಗಳ ಕಾಲ ಭರ್ಜರಿಯಾಗಿ ನಡೆದ ಸಮ್ಮೇಳನ ಕಾಲಕ್ಕೆ ವಿಶ್ವದ ಕನ್ನಡಿಗರಿಗೆ ಯಾವುದೇ ಸ್ಪಷ್ಟ ಸಂದೇಶ ನೀಡಲು ಸಮ್ಮೇಳನ ವಿಫಲವಾಗಿದೆ. ಗಡಿನಾಡಿನಲ್ಲಿ ಕನ್ನಡದ ಜಾತ್ರೆ ನಡೆದದ್ದೇ ವಿಶೇಷ. ಅದರೆ ಮುಂದಿನ ದಿನಗಳಲ್ಲಿ ಬೆಳಗಾವಿ ನಗರಕ್ಕೆ ಇದರಿಂದ ಅನುಕೂಲವಾಗುವ ಭರವಸೆಗಳು ಸಿಕ್ಕಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿ ನಗರದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಜಿಲ್ಲಾ ಕ್ರೀಡಾಂಗಣ ಹಾಗೂ ವಾಕ್ಸಿನ್ ಡಿಪೋ ಪ್ರದೇಶದಲ್ಲಿ ಲಾಲ್‌ಬಾಗ್ ಮಾದರಿಯ ಉದ್ಯಾನವನ ಅಭಿವೃದ್ಧಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆ ದಿಸೆಯಲ್ಲಿ ಬೆಳಗಾವಿ ಭಾಗದ ಜನರಿಗೆ ವಿಶ್ವ ಕನ್ನಡ ಸಮ್ಮೇಳನ ಆಶಾಭಾವನೆ ಹುಟ್ಟಿಸಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ವಿಷಯದಲ್ಲಿ ಕನ್ನಡಿಗರು ಒಗ್ಗಟ್ಟಾಗಿದ್ದಾರೆ. ಸಮ್ಮೇಳನದ ಬಳಿಕ ಅದು ಮತ್ತಷ್ಟು ಗಟ್ಟಿಮುಟ್ಟಾಗಿದೆ ಎಂಬುದು ಸಾಬೀತಾಗಿದೆ. ಸಮ್ಮೇಳನ ಬಳಿಕ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಹೋಗಿದೆ. ಬೆಳಗಾವಿ ವಿವಾದ ಇನ್ನು ಮುಂದೆ ಮುಗಿದ ಅಧ್ಯಾಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಅರ್ಥಪೂರ್ಣ: ಎಲ್ಲ ಕನ್ನಡಪರ ಹೋರಾಟಗಾರರು, ಕಾರ್ಯಕರ್ತರನ್ನು ಕೂಡಿಕೊಂಡು ಸಮ್ಮೇಳನ ನಡೆಸಿದರೆ ಇದು ಅರ್ಥಪೂರ್ಣವಾಗುತ್ತಿತ್ತು. ಅದು ನಡೆಯಲಿಲ್ಲ. ಹಾಗೆಂದು ಸಮ್ಮೇಳನದ ಕುರಿತು ಅಪಸ್ವರ ಇಲ್ಲ. ಸಣ್ಣಪುಟ್ಟ ಅವ್ಯವಸ್ಥೆಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಸಮ್ಮೇಳನ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.
ಅಭಿನಂದನೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ ಅವರು ಮಾತನಾಡಿ, ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. ಅದರ ಪ್ರಚಾರ ವ್ಯವಸ್ಥಿತವಾಗಿ ನಡೆದ ಕಾರಣಕ್ಕೆ ಲಕ್ಷಾಂತರ ಜನರು ಭಾಗವಹಿಸುವಂತಾಯಿತು. ಕನ್ನಡಿಗರು ಜತೆಗೆ ಮರಾಠಿಗರು ಕೂಡಿಕೊಂಡು ಸಮ್ಮೇಳನ ಮಾಡಿದರು. ಕನ್ನಡಿಗರು- ಮರಾಠಿಗರ ಮಧ್ಯೆ ಯಾವುದೇ ಭೇದ, ಭಾವ ಇಲ್ಲ. ರಾಜಕೀಯ ಶಕ್ತಿಗಳು ಅವರಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತಿವೆ ಎಂಬುದು ಸಾಬೀತಾಯಿತು ಎಂದು ಹೇಳಿದರು.
ಆಗ್ರಹ: ವಿಶ್ವ ಕನ್ನಡ ಸಮ್ಮೇಳನದ ಬಳಿಕ ಕನ್ನಡಪರ ಚಟುವಟಿಕೆಗಳು ನಿಲ್ಲಬಾರದು. ಅವು ನಿರಂತರವಾಗಿ ಮುಂದುವರಿಯಬೇಕು. ಕನ್ನಡದ ವಾತಾವರಣ ನಿರ್ಮಿಸುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡ- ಮರಾಠಿಗರ ಹಬ್ಬ
ಕನ್ನಡಪರ ಹೋರಾಟಗಾರ ರಾಘವೇಂದ್ರ ಜೋಶಿ ಅವರು, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಕನ್ನಡ ಮರಾಠಿಗರ ಹಬ್ಬವಾಯಿತು. ಕನ್ನಡಿಗರು- ಮರಾಠಿಗರ ನಡುವಿನ ಬಾಂಧವ್ಯ ಇದರಿಂದ ಮತ್ತಷ್ಟು ಗಟ್ಟಿಯಾಯಿತು ಎಂದು ತಿಳಿಸಿದರು.ಕನ್ನಡ ಹೋರಾಟಗಾರ ಡಾ. ರಾಜಶೇಖರ ಅವರು, ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಕನ್ನಡ ಹೋರಾಟಗಾರರು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ಎಲ್ಲ ಗಣ್ಯರು, ಕನ್ನಡ ಅಭಿಮಾನಿಗಳು ಸಕ್ರೀಯವಾಗಿ ದುಡಿದಿದ್ದಾರೆ. ಇದರ ಯಶಸ್ಸು ಎಲ್ಲರಿಗೂ ಸಂದಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.