ADVERTISEMENT

ಹೆಬ್ಬಾಳ್ಕರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 8:12 IST
Last Updated 21 ಮಾರ್ಚ್ 2014, 8:12 IST
ಬೈಲಹೊಂಗಲ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಬುಧವಾರ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದರು.
ಬೈಲಹೊಂಗಲ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಬುಧವಾರ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದರು.   

ಬೆಳಗಾವಿ: ‘ವೀರರಾಣಿ ಕಿತ್ತೂರ ಚನ್ನಮ್ಮಾಜಿಯ ಧೈರ್ಯ, ಸಾಹಸದ ಇತಿಹಾಸದಿಂದ ಸ್ಫೂರ್ತಿ ಪಡೆದಿರುವ ನಾನು ಬೈಲಹೊಂಗಲದಲ್ಲಿರುವ ವೀರರಾಣಿ ಚನ್ನಮ್ಮಾಜಿಯವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಹೇಳಿದರು.

ಬೈಲಹೊಂಗಲ ತಾಲ್ಲೂಕಿನಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದ ಹೆಬ್ಬಾಳಕರ ಅವರು, ’ಚನ್ನಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದೇನೆ. ಐತಿಹಾಸಿಕ ಜಿಲ್ಲೆಯ ಇತಿಹಾಸವನ್ನು ರಾಷ್ಟ್ರದ ಮೂಲೆ ಮೂಲೆಗೂ ತಲುಪಿಸುವ ಮಹಾದಾಸೆ ಹೊಂದಿರುವ ನನಗೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಸೇವೆ ಮಾಡಲು ಅವಕಾಶ ನೀಡಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಮಲಪ್ರಭಾ ನದಿಯಿಂದ ಬೈಲಹೊಂಗಲದ ಸುತ್ತ ಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಜೊತೆಗೆ ಬೈಲಹೊಂಗಲ ಸಮೀಪ ಮಲಪ್ರಭಾ ನದಿಯಲ್ಲಿ ಚಿಕ್ಕ ಬಾಂದಾರ ನಿರ್ಮಿಸಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿ, ಸಮಾಜಗಳನ್ನು ವಿಭಜಿಸಿ ಜಾತಿ ಜಾತಿಗಳ ನಡುವೆ ವೈಷಮ್ಯದ ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವ ಕನಸು ಕಾಣುತ್ತಿರುವ ಬಿಜೆಪಿಯ ಕುತಂತ್ರ ನಡೆಯುವದಿಲ್ಲ. ದೇಶದಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ದೇಶವನ್ನು ಅಭಿವೃದ್ಧಿ ಮಾಡಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೈಲಹೊಂಗಲ ತಾಲ್ಲೂಕಿನ ಚಚಡಿ, ಸೊಗಲ, ರುದ್ರಾಪುರ, ಹೀರೆಬದ್ನೂರ, ಕಾರಿಮನಿ, ದುಂಡಕೊಪ್ಪ, ಹಿರೇಕೊಪ್ಪ, ಚಿಕೊಪ್ಪ, ಹೊಸೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಬಸವರಾಜ ಕೌಜಲಗಿ, ವಿನಯ ನಾವಲಗಟ್ಟಿ, ಕಿರಣ ಸಾಧುನವರ, ಚಿವಟಗುಂಡಿ ಗೌಡರು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.