ಮೂಡಲಗಿ: ಮೂಡಲಗಿಯಲ್ಲಿ ಹೆಸ್ಕಾಂ ಉಪ ವಿಭಾಗೀಯ ಕಚೇರಿ ಪ್ರಾರಂಭಿಸಬೇಕು ಒತ್ತಾಯಿಸಿ ಇದೇ 26ರಂದು ಸ್ಥಳೀಯ ಹೆಸ್ಕಾಂ ಕಚೇರಿ ಎದುರು ರೈತ ಮತ್ತು ಸಾರ್ವಜನಿಕ ಹೋರಾಟ ಸಂಘಟನೆ ಧರಣಿ ನಡೆಸುವುದಾಗಿ ತಿಳಿಸಿದೆ.
ಈ ಕುರಿತು ಈಗಾಗಲೇ ಘಟಪ್ರಭಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪತ್ರ ಬರೆಯಲಾಗಿದೆ. ಕಂಪೆನಿಯ ನಿಯಮಾವಳಿ ಪ್ರಕಾರ ಸುಟ್ಟಿರುವ ಪರಿವರ್ತಕಗಳನ್ನು 15 ದಿನಗಳಲ್ಲಿ ದುರಸ್ತಿ ಮಾಡಿಸುವುದು, ಅಕ್ರಮ, ಸಕ್ರಮ ಯೋಜನೆಯಲ್ಲಿ ರೈತರಿಂದ ಹಣ ತುಂಬಿಸಿಕೊಂಡಿದ್ದು, ಅವುಗಳ ಸಾಮಗ್ರಿಗಳನ್ನು ಬೇಗನೆ ವಿಲೇವಾರಿ ಮಾಡಬೇಕು.
ಹೆಸ್ಕಾಂ ನಿಯಮಾವಳಿಗಳನ್ನು ಕಚೇರಿ ಮುಂದೆ ಅಳವಡಿಸಬೇಕು. ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಬಿ.ಜಿ. ಗಡಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸ್ಕಾಂ ಅಧಿಕಾರಿಗಳು ತಮ್ಮ ಬೇಡಿಕೆಗೆ ಸ್ಪಂದಿಸಿ ಪರಿಹಾರ ವ್ಯವಸ್ಥೆ ಕಲ್ಪಿಸದಿದ್ದರೆ ಅನಿರ್ಧಿಷ್ಟ ಧರಣಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಳೆ ಸಾಲ: ಅವಧಿ ವಿಸ್ತರಣೆ
ಚಿಕ್ಕೋಡಿ: ಕೇಂದ್ರ ಹಣಕಾಸು ಸಚಿವಾಲಯದ ಆದೇಶದಂತೆ ಯಾವುದೇ ಬ್ಯಾಂಕು ಅಥವಾ ಸಹಕಾರ ಸಂಘಗಳಿಂದ ಬೆಳೆ ಸಾಲ ಪಡೆಯದೇ ಇರುವ ರೈತರಿಗೆ ಸೆ.30ರ ವರೆಗೆ ಸಾಲ ಪಡೆಯಲು ಅವಕಾಶ ಒದಗಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಬಿ. ರೊಟ್ಟಿ ತಿಳಿಸಿದ್ದಾರೆ.
ತಾಲ್ಲೂಕಿನ ಯಾವುದೇ ಬ್ಯಾಂಕು ಅಥವಾ ಸಹಕಾರ ಸಂಘಗಳಿಂದ ಕೃಷಿ ಅಥವಾ ಬೆಳೆ ಸಾಲ ಪಡೆಯದೇ ಇರುವ ರೈತರು ಸಂಬಂಧಪಟ್ಟ ಗ್ರಾಮದ ಬ್ಯಾಂಕು ಅಥವಾ ಸಹಕಾರಿ ಸಂಘಗಳನ್ನು ಸಂಪರ್ಕಿಸಿ ಸಾಲ ಪಡೆಯಬಹುದು. ಈ ಅವಧಿಯಲ್ಲಿ ಸಾಲ ಪಡೆಯುವ ರೈತರಿಗೆ ಬ್ಯಾಂಕುಗಳಿಂದ ಕೆಲವು ರಿಯಾಯಿತಿ ದೊರಯಲಿವೆ.
ಸರಳೀಕೃತ ಕೃಷಿ ಅಥವಾ ಬೆಳೆ ಸಾಲ ಅರ್ಜಿ ಫಾರ್ಮ್‌ಗಳನ್ನು ಜಿಲ್ಲೆ ಎಲ್ಲ ಬ್ಯಾಂಕ್‌ಗಳ ಶಾಖೆಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಿಗುತ್ತವೆ. ಸೆ.30ರ ಒಳಗಾಗಿ ಕೃಷಿಕರು ಸಾಲ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.