ಬೆಳಗಾವಿ: ಅಪಘಾತ ಸಂಭವಿಸಿದರೂ ಪ್ರಾಣಾಪಾಯದಿಂದ ಪಾರಾಗಲು ದ್ವಿಚಕ್ರ ವಾಹನದ ಮುಂಬದಿ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಬಿ.ಪಿ. ಉಮಾಶಂಕರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗಳ ಸಹ ಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ರಸ್ತೆ ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ. ಆದರೆ, ವಿದೇಶಗಳಲ್ಲಿ ಜನಸಂಖ್ಯೆ, ಅಪಘಾತದ ಪ್ರಮಾಣ ಕಡಿಮೆ ಇದ್ದರೂ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಭಾರತದಲ್ಲಿ ಸಮರ್ಪಕ ರಸ್ತೆಗಳ ಕೊರತೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರತಿ ವರ್ಷ ದೇಶದಲ್ಲಿ ವಾಹನಗಳ ಸಂಖ್ಯೆ ಶೇ 10ರಷ್ಟು ಹೆಚ್ಚುತ್ತಿದ್ದು, ವಾಹನ ಸವಾರರು ಸುರಕ್ಷತೆ ಬಗ್ಗೆ ಗಮನ ಹರಿಸಬೇಕಿದೆ. ಸಾರ್ವಜನಿಕರು ಸಂಚಾರ ನಿಯಮ, ಸುರಕ್ಷತಾ ಕ್ರಮಗಳ ಕುರಿತು ಅರಿಯಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ನಿತ್ಯ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ. ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ 5 ನಿಮಿಷಕ್ಕೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನಪ್ಪುತ್ತಿದ್ದು, ಈ ಪ್ರಮಾಣ 3 ನಿಮಿಷಕ್ಕೆ ತಗ್ಗಲಿದೆ. ವಾಹನ ಸವಾರರು ರಸ್ತೆ ಸುರಕ್ಷತೆ ವಿಧಾನ ಅರಿತು ವಾಹನ ಚಲಾಯಿಸುವ ಅಗತ್ಯವಿದೆ ಎಂದು ಕೆಎಲ್ಇ ಆಸ್ಪತ್ರೆ ವೈದ್ಯ ಡಾ. ಐ.ಬಿ. ಶೆಟ್ಟರ್ ತಿಳಿಸಿದರು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
ಡಿಸಿಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ, ಸಂಚಾರ ವಿಭಾಗದ ಎಸಿಪಿ ರಾಜು ಬನಹಟ್ಟಿ, ಸಾರಿಗೆ ಅಧಿಕಾರಿ ಬಿ.ಆರ್. ಮಂಜುನಾಥ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ವೈ.ಎನ್. ದೊಡ್ಡಮನಿ, ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ಗಳಾದ ಜಾವೇದ್ ಮುಶಾಪುರಿ, ಕಾಲಿಮಿರ್ಚಿ, ಇನ್ಸ್‌ಪೆಕ್ಟರ್ ಡಿ.ಸಿ. ಲಕ್ಕಣ್ಣವರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.