ADVERTISEMENT

ಅನುಮತಿ ಇಲ್ಲದೇ ಮನೆ ನಿರ್ಮಾಣ; ಪರಿಹಾರ ರೂಪಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 14:04 IST
Last Updated 17 ಡಿಸೆಂಬರ್ 2018, 14:04 IST
   

ಬೆಳಗಾವಿ: ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೇ ತಮ್ಮ ಸ್ವಂತ ಜಾಗದಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಯಾವ ರೀತಿ ಸಕ್ರಮಗೊಳಿಸಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆದಿದೆ. ಸದ್ಯದಲ್ಲಿಯೇ ಇದಕ್ಕೊಂದು ಪರಿಹಾರ ರೂಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಲವು ವ್ಯಕ್ತಿಗಳು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಇವುಗಳಿಗೆ ವಿದ್ಯುತ್‌, ಕುಡಿಯುವ ನೀರಿನ ಸಂಪರ್ಕ ಕೂಡ ನೀಡಲಾಗಿರುತ್ತದೆ. ಇಂತಹ ಮನೆಗಳನ್ನು ತೆರವುಗೊಳಿಸಲು ಬರುವುದಿಲ್ಲ. ಹೀಗಾಗಿ ಇವುಗಳನ್ನು ಸಕ್ರಮಗೊಳಿಸಿದರೆ ಸರ್ಕಾರಕ್ಕೆ ಒಂದಿಷ್ಟು ಆದಾಯವೂ ಬರುತ್ತದೆ. ಇದರ ಬಗ್ಗೆ ಚಿಂತನೆ ನಡೆದಿದೆ’ ಎಂದು ತಿಳಿಸಿದರು.

ಅನಧಿಕೃತ ಕಟ್ಟಡಗಳು ನಿರ್ಮಾಣವಾದರೆ, ಕೇವಲ ಮಾಲೀಕರಿಗೆ ಅಲ್ಲ, ಇದಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದರು.

ADVERTISEMENT

ಏಕಗವಾಕ್ಷಿ:

ಕಟ್ಟಡ ನಿರ್ಮಿಸಲು ಸ್ಥಳೀಯ ಆಡಳಿತ ಸಂಸ್ಥೆಯಿಂದ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತರಲಿವೆ. ವಿವಿಧ ಇಲಾಖೆ, ಕಚೇರಿಗಳಿಗೆ ಜನರು ಅಲೆದಾಡುವಂತಿಲ್ಲ. ಒಂದೇ ಕಡೆ ಅರ್ಜಿ ನೀಡಬೇಕು. ಒಂದು ತಿಂಗಳೊಳಗೆ ಅನುಮತಿ ಸಿಗಲಿದೆ ಎಂದು ಹೇಳಿದರು.

ಕೆಲವು ಕಡೆ ಅಧಿಕಾರಿಗಳು ಅನಾವಶ್ಯಕವಾಗಿ ಜನರನ್ನು ಅಲೆದಾಡಿಸುತ್ತಾರೆ. ಕೆಲಸವನ್ನು ತ್ವರಿತವಾಗಿ ಮಾಡಿಕೊಡುತ್ತಿಲ್ಲ. ಏಕಗವಾಕ್ಷಿ ಪದ್ಧತಿ ಜಾರಿಯಾದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

ಫೆಬ್ರುವರಿಯಲ್ಲಿ ಸಮಾವೇಶ;

ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ಅಲ್ಪಸಂಖ್ಯಾತರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಯ್ಯದ್‌ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಪಕ್ಷವನ್ನು ಬಲಪಡಿಸಬೇಕಾಗಿದೆ. ಅಲ್ಪಸಂಖ್ಯಾತವೆಂದರೆ ಕೇವಲ ಮುಸ್ಲಿಮರಲ್ಲ. ಜೈನರು, ಸಿಖ್‌ರು ಹಾಗೂ ಬೌದ್ಧ ಧರ್ಮಿಯರೂ ಸೇರಿದ್ದಾರೆ. ಇವರನ್ನೆಲ್ಲ ಒಳಗೊಂಡಂತೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ (ಗ್ರಾಮೀಣ) ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.