ADVERTISEMENT

ಅಥಣಿ ಕ್ಷೇತ್ರಕ್ಕೆ ₹ 2 ಸಾವಿರ ಕೋಟಿ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 10:21 IST
Last Updated 26 ಮೇ 2020, 10:21 IST
ತೆಲಸಂಗ ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು
ತೆಲಸಂಗ ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು   

ತೆಲಸಂಗ: ‘ಈ ಹಿಂದೆ ನಿಮಗೆ ಎರಡೂ ಪಕ್ಷದವರು ನೀರಾವರಿ ವಿಷಯದಲ್ಲಿ ಮೋಸ ಮಾಡಿದ್ದಾರೆ. ನಾನು ಮತ್ತು ಶಾಸಕ ಮಹೇಶ ಕುಮಠಳ್ಳಿ ಸತ್ಯ ಮಾತಾಡುತ್ತೇವೆಯೇ ಹೊರತು ನಾಟಕ ಮಾಡುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘2018ರ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗಕ್ಕೆ ನೀರಾವರಿ ಮಾಡಿಸುವ ಭರವಸೆ ಕೊಟ್ಟಿದ್ದೆ. ಆಗ ಸಮ್ಮಿಶ್ರ ಸರ್ಕಾರದಿಂದ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ, ಕಾಂಗ್ರೆಸ್‌ನಿಂದ ಹೊರ ಬಂದು ಬೀಜೆಪಿ ಸೇರಿದೆವು. ನಾವು ಸ್ವಾರ್ಥಕ್ಕಾಗಿ ಪಕ್ಷ ತೊರೆದಿಲ್ಲ. ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್‍ನಿಂದ ಹೊರಬಂದೆವು. ಆದಷ್ಟು ಬೇಗ ಕೊಟ್ಟಲಗಿ ಭಾಗಕ್ಕೆ ನೀರು ತರುವ ಕೆಲಸ ಮಾಡುತ್ತೇನೆ. ಇದನ್ನು ಸಾಕಾರಗೊಳಿಸುತ್ತೇನೆ. ಈ ಮೂಲಕ, ಜಲಸಂಪನ್ಮೂಲ ಸಚಿವನಾಗಿದ್ದಕ್ಕೆ ಸಾರ್ಥಕತೆ ಹೊಂದುತ್ತೇನೆ’ ಎಂದರು.

ADVERTISEMENT

‘ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಮೂರು ವರ್ಷಗಳಲ್ಲಿ ಮಹೇಶ ಕುಮಠಳ್ಳಿ ಕ್ಷೇತ್ರಕ್ಕೆ ನೀರಾವರಿಗಾಗಿ ₹ 2ಸಾವಿರ ಕೋಟಿ ಕೊಡುತ್ತೇನೆ. ಬರುವ ಚುನಾವಣೆಯಲ್ಲಿ ಪ್ರಚಾರ ಮಾಡದೆ ಮಹೇಶ ಕುಮಠಳ್ಳಿ ಆಯ್ಕೆ ಆಗಬೇಕು’ ಎಂದು ಜನರನ್ನು ಕೋರಿದರು.

‘ಹಣ ಬಿಡುಗಡೆ ಮಾಡಿಸುವ ಜವಾಬ್ದಾರಿ ನನ್ನದು. ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನಿಮ್ಮದು’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘5 ಹೆಕ್ಟೇರ್ ಜಮೀನಿಗೊಂದು ಕೃಷಿ ಹೊಂಡ ಮಾಡಿ ರೈತರ ಜಮೀನುಗಳಿಗೆ ನೀರು ಕೊಡುವ ಕೆಲಸ ಆರಂಭವಾಗಲಿದೆ. ಕರೆ, ಹಳ್ಳಕೊಳ್ಳ ತುಂಬುವುದು, ಚೆಕ್‍ಡ್ಯಾಂ ನಿರ್ಮಿಸುವುದು ಮೊದಲಾದ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತಜ್ಞರೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ಈ ಭಾಗದ ಭೂಮಿಗೆ ಹಸಿರು ಸೀರೆ ಉಡಿಸುವ ಕೆಲಸವನ್ನು ಸಚಿವ ರಮೇಶ ಜಾರಕಿಹೊಳಿ ಅವರು ಮಾಡಿಕೊಡುತ್ತಿದ್ದಾರೆ. ಅಥಣಿಗೆ ನೀರಾವರಿ ಯೋಜನೆಗಳು ಬರಲು ಅವರೇ ಬರಬೇಕಾಯಿತು. ಬರದಿಂದ ನಲುಗಿದ ಜನರಿಗೆ ನೀರು ಕೊಡುವ ಅವರು ನಮ್ಮ ಪಾಲೀನ ಭಗೀರಥ’ ಎಂದು ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುರಪ್ಪ ದಾಶ್ಯಾಳ, ಸಿದ್ದಪ್ಪ ಮುದಕಣ್ಣವರ, ಬಿಜೆಪಿ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.