ADVERTISEMENT

1 ಕೋಟಿ ವಶ: ಮುಂದುವರಿದ ತನಿಖೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:17 IST
Last Updated 23 ಏಪ್ರಿಲ್ 2013, 9:17 IST

ಬೆಳಗಾವಿ: `ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದರೂ 1 ಕೋಟಿ ನಗದು ಹಣವನ್ನು ಸಿಂಡಿಕೇಟ್ ಬ್ಯಾಂಕಿನಿಂದ ಕೆವಿಜಿ ಬ್ಯಾಂಕಿಗೆ ರವಾನೆ ಮಾಡಲಾಗುತ್ತಿತ್ತು ಎಂದು ಆದಾಯ ತೆರಿಗೆ ಇಲಾಖೆಯು ಪ್ರಮಾಣಪತ್ರ ನೀಡಿದೆ. ಆದರೆ, ಆ ಬ್ಯಾಂಕಿನಿಂದ ಈ ಹಣವು ಯಾರಿಗೆ ಹಂಚಿಕೆಯಾಗಲಿತ್ತು ಎಂಬ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ' ಎಂದು ಜಿಲ್ಲಾ ಚುನಾವಣಾಧಿಕಾರಿ ಮುನಿಷ್ ಮೌದ್ಗಿಲ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬ್ಯಾಂಕಿನಿಂದರೂ 1 ಕೋಟಿ ಹಣವು ಸಕ್ಕರೆ ಕಾರ್ಖಾನೆಯ ಮೂಲಕ ರೈತರ ಕಬ್ಬಿನ ಬಿಲ್ಲು ಪಾವತಿಸಲು ಬಳಕೆಯಾಗಲಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಚುನಾವಣೆಯ ಈ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣವು ಅರ್ಹ ರೈತರಿಗೇ ಪಾವತಿಯಾಗಲಿದೆಯೋ ಅಥವಾ ರೈತರ ಹೆಸರಿನಲ್ಲಿ ಅಕ್ರಮವಾಗಿ ಮತದಾರರಿಗೆ ವಿತರಣೆ ಮಾಡಲಾಗುತ್ತಿದ್ದವೋ ಎಂಬ ಬಗ್ಗೆ ತನಿಖೆ ನಡೆಸಲಾಗುವುದು.

ಸುಮಾರು 15 ಸಾವಿರ ರೈತರಿಗೆ ಹಣ ಪಾವತಿಯಾಗಲಿದೆ ಎಂದು ಬ್ಯಾಂಕು ಮಾಹಿತಿ ನೀಡಿದೆ. ಹೀಗಾಗಿ ರೈತರ ಪೂರ್ವಾಪರ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸಬೇಕಾಗಿದ್ದು, ಈ ಪ್ರಕ್ರಿಯೆಯು ಚುನಾವಣೆಯ ಬಳಿಕವೂ ಮುಂದುವರಿಯಬಹುದು' ಎಂದು ತಿಳಿಸಿದರು.
`ಬೀದರ್ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಯ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆಯುತ್ತಿತ್ತು. ಇಲ್ಲಿಯೂ ಅದೇ ರೀತಿಯಲ್ಲಿ ರಾಜಕೀಯ ಉದ್ದೇಶಕ್ಕಾಗಿ ಹಣ ಪಾವತಿಯಾಗುತ್ತಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಮುನಿಷ್ ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದರೂ 48.79 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.ರೂ 57.39 ಲಕ್ಷ ಮೌಲ್ಯದ 4908 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 2 ಲಾರಿ, 3 ಕಾರು, 1 ಬುಲೆರೋ ವಾಹನವನ್ನು ಜಪ್ತಿ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

`ಅಥಣಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 4 ಟಿಎಂಸಿ ನೀರು ಬಿಡಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಚಿಕ್ಕೋಡಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯದ ಪಾಲಿನ 0.70 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ದೂದಗಂಗಾ ನದಿಗೆ ಬಿಡಬೇಕಾಗಿದೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ನೀರನ್ನು ಬಿಡಲಾಗುತ್ತಿತ್ತು.

ಮೊದಲೇ ಬಿಡಲು ಮಹಾರಾಷ್ಟ್ರ ಸರ್ಕಾರದಿಂದ ಆದೇಶ ಬರಬೇಕಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಚರ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ' ಎಂದು ಮುನಿಷ್ ಮೌದ್ಗಿಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT