ADVERTISEMENT

1500 ಮೈಲ್ ಕೂಲಿ ನೇಮಕ: ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 13:59 IST
Last Updated 9 ಮಾರ್ಚ್ 2024, 13:59 IST
ಚನ್ನಮ್ಮನ ಕಿತ್ತೂರಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು
ಚನ್ನಮ್ಮನ ಕಿತ್ತೂರಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು   

ಚನ್ನಮ್ಮನ ಕಿತ್ತೂರು: ‘ಹಾಳಾಗಿರುವ ರಸ್ತೆ ತಾತ್ಕಾಲಿಕವಾಗಿ ಸರಿಪಡಿಸಲು ಮತ್ತು ತಕ್ಷಣ ದುರಸ್ತಿಗೆ ಸಹಾಯಕವಾಗುವಂತೆ 1500 ಮೈಲ್ ಕೂಲಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾಹಿತಿ ನೀಡಿದರು.

ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಶಾಸಕರ ಕಚೇರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಲೋಕೋಪಯೋಗಿ ಇಲಾಖೆಯಲ್ಲಿ ಮೈಲ್ ಕೂಲಿಗಳು ಮೊದಲು ಮಹತ್ವದ ಪಾತ್ರ ವಹಿಸುತ್ತಿದ್ದರು. ಗುಂಡಿ ಬಿದ್ದರೆ ಮಣ್ಣಿನಿಂದ ತುಂಬುವುದು ಮತ್ತು ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿಯದಂತೆ ನೋಡಿಕೊಳ್ಳುತ್ತಿದ್ದರು. ಇದರಿಂದ ರಸ್ತೆಗಳು ಹೆಚ್ಚು ಬಾಳಿಕೆ ಬರುತ್ತಿದ್ದವು. ಹೀಗಾಗಿ ಮತ್ತೆ ಮೈಲ್ ಕೂಲಿ ಹುದ್ದೆ ತುಂಬಿಕೊಳ್ಳಲಾಗುವುದು. ಪ್ರತಿ 30 ಕಿ.ಮೀ ಒಬ್ಬರಂತೆ ಅವರು ಕಾರ್ಯನಿರ್ವಹಿಸಲಿದ್ದಾರೆ’ ಎಂದು ಹೇಳದರು.

ADVERTISEMENT

‘ಕಿತ್ತೂರು ಕ್ಷೇತ್ರದಲ್ಲಿ ಐದು ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಮಂಜೂರು ಮಾಡಲಾಗುವುದು. ಕಟ್ಟಡ, ಡೆಸ್ಕ್ ಸೇರಿ ಅವುಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಭರವಸೆ ನೀಡಿದರು.

‘ಉತ್ತರ ಕನ್ನಡ, ಚಾಮರಾಜನಗರ ಸೇರಿ ಕೆಲವು ಅಗತ್ಯ ಪ್ರದೇಶಗಳಲ್ಲಿ ಸಾವಿರ ಕಾಲುಸಂಕ ನಿರ್ಮಿಸಲು ಇಲಾಖೆ ಮುಂದಾಗಿದೆ. ಪಾದಚಾರಿ, ಬೈಕ್ ಸವಾರರು ಕಾಲುಸಂಕದ ಮೇಲೆ ಹೋಗಬಹುದಾಗಿದೆ. ಪ್ರಸಕ್ತ ವರ್ಷ 100 ಮುಂದಿನ ವರ್ಷ 200 ಹೀಗೆ ಪ್ರತಿವರ್ಷ ಈ ಸಂಖ್ಯೆ ಹೆಚ್ಚಿಸುತ್ತ ಹೋಗಲಾಗುವುದು’ ಎಂದರು.

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ‘ಮುಖ್ಯಮಂತ್ರಿ ನೀಡಿದ ₹25 ಕೋಟಿ ಅನುದಾನವನ್ನು ಹೊಲದ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ರೈತರ ವಾಹನಗಳು, ಚಕ್ಕಡಿ ಎತ್ತುಗಳಿಗೆ ಸಾಗಲು ಹೊಲದ ರಸ್ತೆಗಳು ಅಗತ್ಯವಾಗಿ ಬೇಕಾಗಿವೆ’ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಿತ್ತೂರು, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ನಿಂಗಪ್ಪ ಅರಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.