ADVERTISEMENT

2 ದಿನಕ್ಕೊಮ್ಮೆ ನೀರು ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 6:20 IST
Last Updated 12 ಜನವರಿ 2012, 6:20 IST

ಬೆಳಗಾವಿ: “ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎರಡು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು” ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಭಾಷಚಂದ್ರ ಖುಂಟಿಯಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವು ತಾಲ್ಲೂಕುಗಳಲ್ಲಿ ಆರು ದಿನಗಳಿಗೊಮ್ಮೆ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ವಿಷಯ ತಿಳಿದು ಸಿಡಿಮಿಡಿಗೊಂಡ ಕಾರ್ಯದರ್ಶಿಗಳು, “ಗ್ರಾಮೀಣ ಪ್ರದೇಶಗಳಲ್ಲಿ ಒಂದು ವಾರಕ್ಕೆ ಬೇಕಾದಷ್ಟು ಕುಡಿಯುವ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟ ಹಾಗೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಕನಿಷ್ಠ 2 ಅಥವಾ 3 ದಿನಗಳಿಗೊಮ್ಮೆಯಾದರೂ ಕುಡಿಯುವ ನೀರನ್ನು ಪೂರೈಸಬೇಕು” ಎಂದು ಹೇಳಿದರು.

“ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಒತ್ತು ನೀಡಬೇಕು. ಟ್ಯಾಂಕರ್ ಮೂಲಕ ವಿತರಿಸುತ್ತಿರುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು” ಎಂದು ಸೂಚಿಸಿದರು.

ಜಿಲ್ಲೆಯ 4 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಇಲ್ಲಿ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರಗತಿಯಲ್ಲಿರುವ ಕುಡಿಯುವ ನೀರಿನ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ಈಗ ಅಥಣಿ ತಾಲ್ಲೂಕಿನ 3 ಹಾಗೂ ರಾಯಬಾಗ ತಾಲ್ಲೂಕಿನ 7 ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ವಿತರಿಸಲಾಗುತ್ತಿದ್ದು, ಅವುಗಳನ್ನು ಶುದ್ಧಗೊಳಿಸಿ ವಿತರಿಸಬೇಕು ಎಂದು ಸಲಹೆ ನೀಡಿದರು.

ಬರಪೀಡಿತ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಪಶುಗಳಿಗೆ ಕಲ್ಪಿಸಲಾಗುತ್ತಿರುವ ಕುಡಿಯುವ ನೀರು, ಮೇವು ಹಾಗೂ ವಿವಿಧ ರೋಗಗಳಿಗೆ ನೀಡುತ್ತಿರುವ ಚಿಕಿತ್ಸಾ ಸೌಲಭ್ಯದ ಕುರಿತು ಮಾಹಿತಿ ಪಡೆದ ಸುಭಾಷಚಂದ್ರ,  64 ಪಶುವೈದ್ಯರ ಕೊರತೆ ಇದೆ.
 
ವೈದ್ಯರ ಕೊರತೆ ಇರುವ ಆಸ್ಪತ್ರೆಗಳಿಗೆ ಸದ್ಯ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ವಾರದ 2-3 ದಿನಗಳ ಕಾಲ ನಿಯೋಜಿಸಿ ಪಶುಗಳಿಗೆ ಚಿಕಿತ್ಸೆ ಒದಗಿಸಬೇಕು. ವೈದ್ಯರು ಆಸ್ಪತ್ರೆಗಳಿಗೆ ಆಗಮಿಸುವ ಕುರಿತು ಮಾಹಿತಿಯನ್ನು ಆಯಾ ಗ್ರಾಮಸ್ಥರಿಗೆ ತಿಳಿಸಬೇಕು ಎಂದು ಸೂಚಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಿ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಶೇ.10ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ. 6ರಷ್ಟು ಪರಿಶಿಷ್ಟ ವರ್ಗದ ಜನಸಂಖ್ಯೆ ಇದ್ದರೂ ಈ ಜನಸಂಖ್ಯೆ ಪ್ರಮಾಣಕ್ಕೆ ಹೋಲಿಸಿದರೆ ಉದ್ಯೋಗ ಖಾತರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಬಡ ಜನರಿಗೆ ಉದ್ಯೋಗ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಾರ್ಯದರ್ಶಿಗಳು ಅಧಿಕಾರಿಗಳಿಗೆ ತಿಳಿಸಿದರು.

ಸಂಪೂರ್ಣ ಸ್ವಚ್ಛತಾ ಆಂದೋಲನದ ಅಡಿಯಲ್ಲಿ 52 ಸಾವಿರ ಶೌಚಾಲಯಗಳ ಪೈಕಿ 32 ಸಾವಿರ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಬಾಕಿ ಉಳಿದಿರುವ ಶೌಚಾಲಯಗಳ ನಿರ್ಮಾಣ ಕಾರ್ಯ ತೀವ್ರಗೊಳಿಸಬೇಕು ಸುವರ್ಣ ಗ್ರಾಮ ಯೋಜನೆಯಡಿ ಆಯಾ ಗ್ರಾಮಗಳಿಗೆ ಗುಣಮಟ್ಟದ ಮೂಲಸೌಲಭ್ಯ ಕಲ್ಪಿಸಬೇಕು.

ರಸ್ತೆ ಬದಿಗಳಲ್ಲಿರುವ ಗ್ರಾಮಗಳ ಸ್ವಚ್ಛತೆಗೆ ಗಮನ ನೀಡಬೇಕು. ವಿವಿಧ ವಸತಿ ಯೋಜನೆಗಳ ಅಡಿ ಸಕಾಲಕ್ಕೆ ವಸತಿ ಸೌಕರ್ಯವನ್ನು ಬಡ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಅಜಯ ನಾಗಭೂಷಣ ಮಾತನಾಡಿ, ಕುಡಿಯುವ ನೀರಿನ ಯೋಜನೆಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆಗಳ ಗುಂಡಿ ಮುಚ್ಚುವ ಕುರಿತು ಮುಂದಿನ 15 ದಿನಗಳಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ಸಂಭವವಿದೆ ಎಂದು ಸಭೆಗೆ ತಿಳಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.