ADVERTISEMENT

20 ಗಂಟೆ ನಡೆದ ಗಣೇಶ ವಿಸರ್ಜನೆ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:40 IST
Last Updated 13 ಸೆಪ್ಟೆಂಬರ್ 2011, 9:40 IST
20 ಗಂಟೆ ನಡೆದ ಗಣೇಶ ವಿಸರ್ಜನೆ!
20 ಗಂಟೆ ನಡೆದ ಗಣೇಶ ವಿಸರ್ಜನೆ!   

ಬೆಳಗಾವಿ: ನಗರದಲ್ಲಿ ಭಾನುವಾರ ಸಂಜೆ ಆರಂಭವಾದ ಸಾರ್ವಜನಿಕ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆ ನಿರಂತರ 20 ಗಂಟೆಗಳ ಕಾಲ ನಡೆಯುವ ಮೂಲಕ ಗಮನ ಸೆಳೆಯಿತು. ಭಾನುವಾರ ಸಂಜೆ ನಾಲ್ಕು ಗಂಟೆಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ಸಾರ್ವಜನಿಕ ಗಣೇಶ ಮೂರ್ತಿಗಳ ಅದ್ದೂರಿ ಮೆರವಣಿಗೆ ಸೋಮವಾರ ಮಧ್ಯಾಹ್ನ 12 ಗಂಟೆಯವರೆಗೂ ನಡೆಯಿತು.

ಕಪಿಲೇಶ್ವರ ಕೆರೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಕಪಿಲೇಶ್ವರ ರಸ್ತೆ ಹಾಗೂ ಖಡಕ್‌ಗಲ್ಲಿಯ ಗಣೇಶ ವಿಸರ್ಜನೆ ಆಗುವ ಮೂಲಕ ಮೆರವಣಿಗೆಗೆ ತೆರೆ ಎಳೆಯಲಾಯಿತು.

ಭಾನುವಾರ ರಾತ್ರಿ ನಡೆಯುತ್ತಿದ್ದ ಮುಖ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರ `ಗಣಪತಿ ಬಪ್ಪ ಮೋರಯ, ಮಂಗಲ ಮೂರುತಿ ಮೋರಯ~ ಜಯಘೋಷ ಮುಗಿಲು ಮುಟ್ಟಿತ್ತು. ಡಾಲ್ಬಿ ಸ್ಪೀಕರ್‌ನಿಂದ ತೇಲಿ ಬರುತ್ತಿದ್ದ ಅಬ್ಬರದ ಸಂಗೀ ತಕ್ಕೆ ಹೆಜ್ಜೆ ಹಾಕುತ್ತಿದ್ದ ಭಕ್ತರ ಕುಣಿತವನ್ನು ಕಣ್ತುಂಬಿಕೊಳ್ಳಲು ನಡು ರಾತ್ರಿಯವರೆಗೂ ನಗರದ ಮೂಲೆ ಮೂಲೆಗಳಿಂದ ಜನ ಸಾಗರ ಹರಿದು ಬಂದಿತ್ತು.

ಮುಖ್ಯ ಮೆರವಣಿಗೆ ನಡೆದ ಹುತಾತ್ಮ ಚೌಕ್, ರಾಮದೇವಗಲ್ಲಿ, ಸಮಾದೇವಿಗಲ್ಲಿ, ಕಾಲೇಜು ರಸ್ತೆ, ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ, ತಹಶೀಲದಾರ ಗಲ್ಲಿ, ಕಪಿಲೇಶ್ವರ ರಸ್ತೆಯಲ್ಲಿ ಸೋಮವಾರ ಬೆಳಗಿನಜಾವದವರೆಗೂ ಜನಜಾತ್ರೆ ನೆರೆದಿತ್ತು.

ಈ ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆಯೂ ಹಲವು ಗಣಪತಿಗಳ ಮೆರ ವಣಿಗೆ ನಡೆದಿತ್ತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಕಪಿಲೇಶ್ವರ ರಸ್ತೆ ಹಾಗೂ ಖಡಕ್‌ಗಲ್ಲಿಯ ಗಣೇಶನನ್ನು ವಿಸರ್ಜಿಸುವುದರೊಂದಿಗೆ ಈ ವರ್ಷದ ಗಣೇಶ ಹಬ್ಬಕ್ಕೆ ಸಂಭ್ರಮದಿಂದ ವಿದಾಯ ಹೇಳಲಾಯಿತು.

ಯುವಕನಿಗೆ ಗಾಯ: ಕಲ್ಲು ತೂರಾಟ
ನಗರದ ಕಪಿಲೇಶ್ವರ ಕೆರೆಯಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕ್ರೇನ್‌ನ ಸರಪಳಿ ತುಂಡಾದ ಪರಿಣಾಮ ಯುವಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಅನಗೋಳದ ಶಿವಶಕ್ತಿ ನಗರದ ಸಚಿನ್ ಮಹಾದೇವ ಶಿಂಧೆ (20) ಎಂದು ಗುರುತಿಸಲಾಗಿದೆ. ಭಾನುವಾರ ಆರಂಭಗೊಂಡಿದ್ದ ಸಾರ್ವಜನಿಕ ಗಣೇಶ ವಿಸರ್ಜ ನೆಯು ಕಪಿಲೇಶ್ವರ ಕೆರೆಯಲ್ಲಿ ಸೋಮವಾರ ಬೆಳಿಗ್ಗೆಯೂ ಮುಂದುವ ರಿದಿತ್ತು. ಕೆರೆಯಲ್ಲಿ ಅನಗೋಳ ಗಣೇಶ ವಿಸರ್ಜನೆ ನಡೆಯುತ್ತಿ ಸಂದರ್ಭದಲ್ಲೇ ಕ್ರೇನ್ ಮೂಲಕ ವಡಗಾವಿಯ ಗಣೇಶ ವಿಸರ್ಜನೆ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಕ್ರೇನ್‌ನ ಕೊಂಡಿ ಕಳಚಿ ಸಚಿನ್ ಶಿಂಧೆ ಮೇಲೆ ಗಣೇಶನ ಮೂರ್ತಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ್ದಾನೆ. ಗಲ್ಲ ಹಾಗೂ ತೋಳಿಗೆ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.

ಘಟನೆಯಿಂದ ರೊಚ್ಚಿಗೆದ್ದ ಜನರು ಕ್ರೇನ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ, ಸಚಿನ್ ಮೃತಪಟ್ಟಿಲ್ಲ ಎಂಬುದನ್ನು ಖಚಿತ ಪಡಿಸಿದ ಬಳಿಕ ವಾತಾವರಣವು ತಿಳಿಗೊಂಡಿತು.

ಶವ ಪತ್ತೆ: ಭಾನುವಾರ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದ ನಗರದ ಜಕ್ಕಿನ ಹೊಂಡದ ರಾಮತೀರ್ಥ ಕೆರೆಯಲ್ಲಿ ಸೋಮವಾರ ಸಂಜೆ ಯುವಕರೊಬ್ಬರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯು 35 ವರ್ಷಗಳ ವಯಸ್ಸಿನವರಾಗಿದ್ದು, ಬರಿ ಒಳ ಉಡುಪನ್ನು ಮಾತ್ರ ಧರಿಸಿದ್ದಾರೆ. ಭಾನುವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.