ADVERTISEMENT

220 ಕೆ.ವಿ. ವಿದ್ಯುತ್‌ ಕೇಂದ್ರ ಸ್ಥಾಪನೆ: ಗಿರಿಧರ್‌ ಕುಲಕರ್ಣಿ

ಬೆಳಗಾವಿ ನಗರ, ತಾಲ್ಲೂಕು ಹಾಗೂ ಖಾನಾಪುರಕ್ಕೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 9:31 IST
Last Updated 9 ಅಕ್ಟೋಬರ್ 2018, 9:31 IST
ಬೆಳಗಾವಿ ಫೌಂಡ್ರಿ ಕ್ಲಸ್ಟರ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹೆಸ್ಕಾಂ ಎಸ್‌ಇ ಗಿರಿಧರ್ ಕುಲಕರ್ಣಿ ಮಾತನಾಡಿದರು
ಬೆಳಗಾವಿ ಫೌಂಡ್ರಿ ಕ್ಲಸ್ಟರ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹೆಸ್ಕಾಂ ಎಸ್‌ಇ ಗಿರಿಧರ್ ಕುಲಕರ್ಣಿ ಮಾತನಾಡಿದರು   

ಬೆಳಗಾವಿ: ‘ನಗರ, ತಾಲ್ಲೂಕು ಹಾಗೂ ಖಾನಾಪುರ ತಾಲ್ಲೂಕುಗಳಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡುವ ಸಂಬಂಧ ತಾಲ್ಲೂಕಿನಲ್ಲಿ 220 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪಿಸಲು ಯೋಜಿಸಲಾಗಿದೆ’ ಎಂದು ಹೆಸ್ಕಾಂ ಬೆಳಗಾವಿ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಗಿರಿಧರ್‌ ಕುಲಕರ್ಣಿ ಇಲ್ಲಿ ತಿಳಿಸಿದರು.

ಉದ್ಯಮಭಾಗ್‌ನ ಫೌಂಡ್ರಿ ಕ್ಲಸ್ಟರ್‌ನಲ್ಲಿ ಉದ್ಯಮಿಗಳೊಂದಿಗೆ ಮಂಗಳವಾರ ನಡೆದ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಪ್ರಸ್ತುತ ಹಿಂಡಾಲ್ಕೊ ಬಳಿ 220 ಕೆ.ವಿ. ಕೇಂದ್ರವಿದೆ. ಅದು ಹಳೆಯದಾಗಿದೆ. ಅಲ್ಲದೇ, ಇಂದಿನ ಬೇಡಿಕೆಗೆ ಅದು ಸಾಕಾಗುತ್ತಿಲ್ಲ. ಹೀಗಾಗಿ, ಹೊಸ ಕೇಂದ್ರ ಸ್ಥಾಪನೆಗೆ ತಾಂತ್ರಿಕ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಇದು ಅತ್ಯಂತ ಮಹತ್ವವಾಗಿ ಬೇಕಾಗಿದೆ. ತಾಲ್ಲೂಕಿನ ಯರಮಾಳ ಅಥವಾ ನಂದಿಹಳ್ಳಿಯಲ್ಲಿ ಕನಿಷ್ಠ 15 ಎಕರೆ ಜಾಗ ಕೇಳಲಾಗಿದೆ. ಜಾಗ ದೊರೆತ ನಂತರ, ಅಂದಾಜು‍ಪಟ್ಟಿ ಸಿದ್ಧಪಡಿಸಲಾಗುವುದು. ಕೆಪಿಟಿಸಿಎಲ್‌ನವರು ಕಾಮಗಾರಿ ನಿರ್ವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಮಚ್ಚೆಯಲ್ಲೊಂದು ಕೇಂದ್ರ

‘ಮಚ್ಚೆ ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗುವಂತೆ ಅಲ್ಲಿ 110 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆಗೂ ಯೋಜಿಸಲಾಗಿದೆ. ಈಗಿರುವ ಕೇಂದ್ರಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಇದನ್ನು ತಗ್ಗಿಸಲು ಹೆಚ್ಚುವರಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘20 ಮಂದಿ ಮೆಕ್ಯಾನಿಕ್‌ಗಳಿಗೆ ಆಪರೇಟರ್‌ ಹುದ್ದೆಗೆ ಭರ್ತಿ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅವರೇ ಎಲ್‌ಸಿ (ಲೈನ್‌ ಕ್ಲಿಯರ್‌) ತೆಗೆದುಕೊಳ್ಳಬಹುದು. ಕಿರಿಯ ಎಂಜಿನಿಯರ್‌ (ಜೆಇ) ಅನುಮತಿ ಕಾಯಬೇಕಿರುವುದಿಲ್ಲ. ಹೀಗಾಗಿ, ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್‌ ಸಂಬಂಧಿ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆಯಲಿದೆ’ ಎಂದು ವಿವರಿಸಿದರು.

‘ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳು ಬೆಳಗುವುದಿಲ್ಲ. ಇದರಿಂದಾಗಿ ಬಹಳ ತೊಂದರೆಯಾಗಿದೆ’ ಎಂದು ಉದ್ಯಮಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಿರಿಧರ್, ‘ಬೀದಿದೀಪಗಳ ನಿರ್ವಹಣೆ ಪಾಲಿಕೆ ಅಧಿಕಾರಿಗಳ ಜವಾಬ್ದಾರಿಯಾಗಿದೆ’ ಎಂದು ಸ್ಪಷ್ಟಪಡಿಸಿದರು.

ಫೌಂಡ್ರಿ ಕ್ಲಸ್ಟರ್‌ ಬೇಡಿಕೆಗಳು

ರಾತ್ರಿ ಪಾಳಿಯಲ್ಲಿನ ಸೇವೆಯಲ್ಲಿ ಸುಧಾರಣೆ ತರಬೇಕು. ಕೈಗಾರಿಕಾ ಪ್ರದೇಶಗಳಿಗೆ ಒದಗಿಸಿರುವ ಎರಡು ಮೊಬೈಲ್‌ ವ್ಯಾನ್‌ಗಳೊಂದಿಗೆ ಜೆಇಗಳನ್ನು ನಿಯೋಜಿಸಬೇಕು. ನಾವಗೆ ಕೈಗಾರಿಕಾ ಪ್ರದೇಶದಲ್ಲಿ 110 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪಿಸಬೇಕು. ಹೊನಗಾದಲ್ಲಿ 110 ಕೆ.ವಿ. ಕೇಂದ್ರದ ಕಾಮಗಾರಿ ಪೂರ್ಣಗೊಳಿಸಬೇಕು. ದೇಸೂರಿನಲ್ಲಿ 220 ಕೆ.ವಿ. ಕೇಂದ್ರ ಸ್ಥಾಪಿಸಬೇಕು. ಮಚ್ಚೆ ಕೇಂದ್ರದಲ್ಲಿ ಮತ್ತೊಬ್ಬ ಜೆಇ ನಿಯೋಜಿಸಬೇಕು. ಕೌಶಲವುಳ್ಳ ಮಾನವ ಸಂಪನ್ಮೂಲ ಹೊಂದಬೇಕು. ಗುಣಮಟ್ಟದ ಸಲಕರಣೆಗಳನ್ನು ಬಳಸುವಂತಾಗಬೇಕು. 10 ಎಚ್‌ಪಿ (ಅಶ್ವಶಕ್ತಿ)ಯಿಂದ 40 ಎಚ್‌ಪಿವರೆಗಿನ ಸಣ್ಣ ಘಟಕಗಳಿಗೆ ಹೆಸ್ಕಾಂನಿಂದಲೇ ಪರಿವರ್ತಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ ಫೌಂಡ್ರಿ ಕ್ಲಸ್ಟರ್‌ ಅಧ್ಯಕ್ಷ ರಾಮ್ ಭಂಡಾರೆ, ಕಾರ್ಯದರ್ಶಿ ಸದಾನಂದ ಹುಂಬರವಾಡಿ, ನಿರ್ದೇಶಕರಾದ ಪ್ರಕಾಶ್ ಪಂಡಿತ್, ಸಚಿನ್ ಸಬ್ನಿಸ್, ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಫೌಂಡ್ರಿಮನ್‌ ಅಧ್ಯಕ್ಷ ‍ಪರಾಗ್‌ ಭಂಡಾರೆ, ಕಾರ್ಯದರ್ಶಿ ಆನಂದ ದೇಸಾಯಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.