ADVERTISEMENT

24 ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:40 IST
Last Updated 5 ಜನವರಿ 2012, 8:40 IST

ಬೆಳಗಾವಿ: ಜಿಲ್ಲೆಯಲ್ಲಿ 24 ನೂತನ ವಿದ್ಯುತ್ ವಿತರಣಾ ಕೇಂದ್ರಗಳನ್ನು 400 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.

ನಗರದದಲ್ಲಿ ಹೆಸ್ಕಾಂ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿನ ವಿದ್ಯುತ್ ಸಮಸ್ಯೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

`ಹದಿನೇಳು 110 ಕೆ. ವಿ. ಹಾಗೂ ಏಳು 220 ಕೆ ವಿ ವಿದ್ಯುತ್ ವಿತರಣಾ ಕೇಂದ್ರಗಳ ಆರಂಭಕ್ಕೆ  ತೀರ್ಮಾನಿಸಲಾಗಿದೆ. 21 ವಿದ್ಯುತ್ ವಿತರಣಾ ಕೇಂದ್ರಗಳಿಗೆ ಜಮೀನನ್ನು ಪಡೆಯಲಾಗಿದೆ. ಉಳಿದ ಕೇಂದ್ರಗಳ ಆರಂಭಕ್ಕೆ ಬಾಕಿ ಇರುವ ಭೂಮಿಯನ್ನು ಕೂಡಲೇ ಒದಗಿಸಿಕೊಡುವಂತೆ~ ಜಿಲ್ಲಾಧಿಕಾರಿಗೆ ಅವರು ಸೂಚಿಸಿದರು.

ಮುಂಬರುವ ವರ್ಷದಲ್ಲಿ 38 ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಯ ಪ್ರಸ್ತಾವನೆ ಸರ್ಕಾರ ಮಟ್ಟದಲ್ಲಿದೆ. ಈ ಕುರಿತಂತೆ ಇಂಧನ ಸಚಿವರು, ಇಲಾಖೆಯ ಅಧಿಕಾರಿಗಳು ಹಾಗೂ ಇಲ್ಲಿಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಈ ಕೇಂದ್ರಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು~ ಎಂದರು.

`ಜಿಲ್ಲೆಯಲ್ಲಿ ವಿದ್ಯುತ್ ಪರಿವರ್ತಕಗಳು ಕೆಟ್ಟರೆ ಬೇಗನೆ ದುರಸ್ತಿ ಮಾಡಿಕೊಡುತ್ತಿಲ್ಲ. ಇದರಿಂದಾಗಿ ರೈತರು ತೀವ್ರ ತೊಂದರೆ ಎದುರಿಸಬೇಕಾಗಿದೆ. ಪರಿವರ್ತಕಗಳ ದುರಸ್ತಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಒಂದು ವಾರದಲ್ಲಿ ದುರಸ್ತಿ ಮಾಡಿಕೊಡಬೇಕು~ ಎಂದು ಸೂಚಿಸಿದರು.

ಸಂಸದ ಸುರೇಶ ಅಂಗಡಿ ಶಾಸಕರಾದ ಸಂಜಯ ಪಾಟೀಲ, ಡಿ.ಎಂ. ಐಹೊಳೆ, ಫಿರೋಜ್ ಸೇಠ, ಕಾಕಾಸಾಹೇಬ ಪಾಟೀಲ, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ, ಜಿಲ್ಲಾಧಿಕಾರಿ ಡಾ.ಅಜಯ ನಾಗಭೂಷಣ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.