ADVERTISEMENT

24X7 ಕುಡಿಯುವ ನೀರು ಪೂರೈಕೆ ಯೋಜನೆ; ಪ್ರಸ್ತಾವನೆ ಸಲ್ಲಿಕೆ: ಶಾಸಕ ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 11:16 IST
Last Updated 8 ಅಕ್ಟೋಬರ್ 2018, 11:16 IST

ಬೆಳಗಾವಿ: ನಗರದಲ್ಲಿ ಬಾಕಿ ಉಳಿದಿರುವ 48 ವಾರ್ಡ್‌ಗಳಲ್ಲಿಯೂ 24x7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಇದಕ್ಕಾಗಿ ₹ 663 ಕೋಟಿ ವೆಚ್ಚ ತಗಲುವ ಅಂದಾಜು ಇದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು 2008–13ರ ಅವಧಿಯಲ್ಲಿ ಶಾಸಕನಾಗಿದ್ದಾಗ ಈ ಯೋಜನೆಗೆ ವಿಶ್ವ ಬ್ಯಾಂಕ್‌ ಸೇರಿದಂತೆ ವಿವಿಧ ಇಲಾಖೆಗಳು ಅನುಮೋದನೆ ನೀಡಿದ್ದವು. 2013ರ ಅವಧಿಯಲ್ಲಿ ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿತ್ತು. ಆದರೆ, ನಂತರ ಬಂದ ಶಾಸಕರು ಆಸಕ್ತಿ ತೋರಲಿಲ್ಲ. ಹೀಗಾಗಿ ಆ ಯೋಜನೆ ಅರ್ಧಕ್ಕೆ ನಿಂತು ಹೋಗಿತ್ತು. ಅದಕ್ಕೀಗ ಪುನರ್‌ ಚಾಲನೆ ನೀಡಲು ಮುಂದಾಗಿದ್ದೇನೆ’ ಎಂದು ನುಡಿದರು.

‘ಮೊದಲ ಹಂತದಲ್ಲಿ 10 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಇನ್ನುಳಿದ 48 ವಾರ್ಡ್‌ಗಳಲ್ಲಿ ಮುಂದಿನ ಹಂತದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಗೊಳಿಸಲಾಗಿತ್ತು. ಆದರೆ, ಅಂದಿನ ಶಾಸಕರ ನಿರಾಸಕ್ತಿಯಿಂದ ಈ ಯೋಜನೆ ಅರ್ಧಕ್ಕೆ ನಿಂತುಹೋಗಿತು. ಇದಕ್ಕಾಗಿ ನೀಡಿದ್ದ ಅನುದಾನವನ್ನು ಕೂಡ ವಿಶ್ವಬ್ಯಾಂಕ್‌ ವಾಪಸ್‌ ಪಡೆದುಕೊಂಡಿತ್ತು’ ಎಂದು ಹೇಳಿದರು.

ADVERTISEMENT

ವಿಶ್ವಬ್ಯಾಂಕ್‌, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ (ಕೆಯುಐಡಿಎಫ್‌ಸಿ), ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನುಡಿದರು.

ಸ್ಮಾರ್ಟ್‌ ಸಿಟಿ ರಸ್ತೆ:

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಸುಮಾರು ₹ 40 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೆಪಿಟಿಸಿಎಲ್‌ ರಸ್ತೆ ಹಾಗೂ ಮಂಡೋಳಿ ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಯೋಜನೆಗೆ ದುಂದು ವೆಚ್ಚ ಮಾಡಲಾಗುತ್ತಿದೆ. ಇಷ್ಟೊಂದು ಹಣದ ಅವಶ್ಯಕತೆ ಇರಲಿಲ್ಲ. ಇದರ ಬಗ್ಗೆ ಈಗಾಗಲೇ ವಿಧಾನಸಭೆಯ ಅಂದಾಜು ಲೆಕ್ಕ (ಎಸ್ಟಿಮೇಟ್‌) ಸಮಿತಿಗೆ ದೂರು ನೀಡಿದ್ದೇನೆ’ ಎಂದರು.

‘ಇದೇ ಯೋಜನೆಯಡಿ ಹಾಗೂ ಇದೇ ಮಾನದಂಡಗಳನ್ನು ಬಳಸಿ ಒಡಿಸ್ಸಾದ ಭುವನೇಶ್ವರ ನಗರದಲ್ಲಿ ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ರಸ್ತೆಗಳನ್ನು ಪರಿಶೀಲಿಸಲು ಸಮಿತಿಯ ಸದಸ್ಯರ ಜೊತೆ ಸದ್ಯದಲ್ಲಿಯೇ ಭೇಟಿ ನೀಡಲಿದ್ದೇನೆ. ಅಲ್ಲಿನ ಕಾಮಗಾರಿಗಳು ಹಾಗೂ ಇಲ್ಲಿನ ಕಾಮಗಾರಿಗಳ ಜೊತೆ ತಾಳೆ ಹಾಕಿ ನೋಡುತ್ತೇವೆ. ವ್ಯತ್ಯಾಸ ಕಂಡುಬಂದರೆ, ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ’ ಎಂದು ತಿಳಿಸಿದರು.

ಕೆಲಸಗಳಾಗುತ್ತಿಲ್ಲ– ಆರೋಪ:

ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 6 ತಿಂಗಳು ಕಳೆದಿದ್ದರೂ ಕೆಲಸಗಳು ಆಗುತ್ತಿಲ್ಲ. ಹಲವು ಬಾರಿ ವಿಧಾನಸಭೆಗೆ ಹೋಗಿ ಭೇಟಿಯಾದರೂ ಕಾಮಗಾರಿಗಳಿಗೆ ಅನುಮೋದನೆ ದೊರಕುತ್ತಿಲ್ಲ. ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

‘ಉತ್ತರ ಭಾಗದ ಶಾಸಕರ ಕೆಲಸಗಳು ಆಗುತ್ತಿಲ್ಲ. ಬಹುಶಃ ದಕ್ಷಿಣ ಭಾಗದ ಶಾಸಕರ ಕೆಲಸಗಳು ಮಾತ್ರ ಆಗುತ್ತಿರುವಂತೆ ಭಾಸವಾಗುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.