ADVERTISEMENT

4 ರಂದು ಚಿಂಚಣಿ ಶ್ರೀಗಳಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 5:35 IST
Last Updated 3 ಅಕ್ಟೋಬರ್ 2017, 5:35 IST

ಚಿಕ್ಕೋಡಿ: ‘ಗಡಿನಾಡಿನ ಕನ್ನಡದ ಗುಡಿ’ ಎಂದೇ ಖ್ಯಾತಿಯಾಗಿರುವ ತಾಲ್ಲೂಕಿನ ಚಿಂಚಣಿ ಗ್ರಾಮದ ಸಿದ್ದಸಂಸ್ಥಾನಮಠದ ಪೀಠಾಧಿಕಾರಿ ಅಲ್ಲಮಪ್ರಭು ಸ್ವಾಮೀಜಿ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಕನ್ನಡ ಕ್ರಿಯಾ ಸಮಿತಿ ‘ಕರ್ನಾಟಕ ಚೂಡಾಮಣಿ ಪ್ರಶಸ್ತಿ’ ನೀಡಿ ಗೌರವಿಸಲಿದೆ.

ಇದೇ 4 ರಂದು ಪಟ್ಟಣದ ಕೇಶವ ಕಲಾ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ರಿಂದ ಪಟ್ಟಣದ ಬಸವ ವೃತ್ತದಿಂದ ಬಸ್‌ ನಿಲ್ದಾಣದ ಮೂಲಕ ಕೇಶವ ಕಲಾಭವನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಪೂಜ್ಯರ ಮೆರವಣಿಗೆ ನಡೆಯಲಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಚಂದ್ರಶೇಖರ ಮೆರವಣಿಗೆ ಚಾಲನೆ ನೀಡುವರು.

ಬೆಳಿಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಿಕ ಕಾರ್ಯಕ್ರಮ ಉದ್ಘಾಟಿಸುವರು.

ADVERTISEMENT

ಚಿಕ್ಕೋಡಿಯ ಸಂಪಾದನ ಸ್ವಾಮೀಜಿ, ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ.ಚನ್ನೇಗೌಡ, ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ಅಧ್ಯಕ್ಷ ಸದಾಶಿವ ಡಂಗನ್ನವರ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಮಹಾದೇವ ಉದಗಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಗೋಪಾಲ ಭಜಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.