ADVERTISEMENT

ಲಂಚ ಪಡೆದ ಗುಮಾಸ್ತನಿಗೆ 4 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 14:06 IST
Last Updated 4 ಜೂನ್ 2019, 14:06 IST

ಬೆಳಗಾವಿ: ಖಾನಾಪುರ ತಾಲ್ಲೂಕಿನ ಹಿರೇಮುನವಳ್ಳಿಯಲ್ಲಿ ಬೆಳೆದಿದ್ದ ಸಾಗವಾನಿ ಮರಗಳನ್ನು ಕಟಾವು ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಶಿಫಾರಸ್ಸು ಮಾಡಲು ಲಂಚ ಪಡೆದಿದ್ದ ಪ್ರಥಮ ದರ್ಜೆ ಗುಮಾಸ್ತ ಸಂತೋಷಕುಮಾರ ಭಗವಂತ ಕಾಂಬಳೆ ಅವರಿಗೆ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಹಾಗೂ ವಿಶೇಷ ನ್ಯಾಯಾಲಯವು 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 8,000 ದಂಡ ವಿಧಿಸಿದೆ.

ಬಾಹುಬಲಿ ಅರ್ಜುನ ಪಾಟೀಲ ಅವರು ತಮ್ಮ ಮಗ ಸಾಗರ ಅವರಿಗೆ ಸೇರಿದ 1.18 ಗುಂಟೆ ಜಮೀನಿನಲ್ಲಿ ಸಾಗುವಾನಿ ಮರ ಬೆಳೆಸಿದ್ದರು. ಇವುಗಳನ್ನು ಕಟಾವು ಮಾಡಲು ಅನುಮತಿ ಕೋರಿ 2015ರ ಜನವರಿಯಲ್ಲಿ ಅರ್ಜಿ ಗುಜರಾಯಿಸಿದ್ದರು. ಕಟಾವು ಮಾಡಲು ಅನುಮತಿ ನೀಡಬಹುದೆಂದು ಜಿಲ್ಲಾಧಿಕಾರಿ ಅವರಿಗೆ ಶಿಫಾರಸ್ಸು ಮಾಡಲು ಸಂತೋಷಕುಮಾರ ₹ 4,000 ಲಂಚದ ಬೇಡಿಕೆ ಇಟ್ಟಿದ್ದರು. ಇದರ ಬಗ್ಗೆ ಬಾಹುಬಲಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಜನವರಿ 19ರಂದು ₹ 3,000 ಲಂಚ ಪಡೆಯುತ್ತಿದ್ದ ವೇಳೆ ಸಂತೋಷಕುಮಾರ ಅವರನ್ನು ಲೋಕಾಯುಕ್ತರು ಬಲೆಗೆ ಕೆಡವಿದ್ದರು. ಲೋಕಾಯುಕ್ತ ಡಿವೈಎಸ್ಪಿ ಜಿ.ಆರ್‌. ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಡಿವೈಎಸ್ಪಿ ಆರ್‌.ಆರ್‌. ಅಂಬಡಗಟ್ಟಿ ತನಿಖೆ ಕೈಗೊಂಡು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಆರ್‌. ಎಕ್ಸಂಬಿ ಹಾಗೂ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಧರ ಶೆಟ್ಟಿ ಶಿಕ್ಷೆ ವಿಧಿಸಿ, ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.