ADVERTISEMENT

ದಾನಗಳಿಂದ ದೊಡ್ಡವನಾಗುವ ಮನುಷ್ಯ

ಮುರಿಗೆವ್ವ ಅಜ್ಜಿ ಪುಣ್ಯಾರಾಧನೆ: ಬಸವರಾಜ ಸ್ವಾಮೀಜಿ ಮಾತು

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 10:50 IST
Last Updated 4 ಜನವರಿ 2018, 10:50 IST
ಐಗಳಿ ಸಮೀಪದ ಕಕಮರಿ ಗ್ರಾಮದ ಲಿಂಗೈಕ್ಯ ಮುರಿಗೆವ್ವ ಅಜ್ಜಿಯ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಸ್ವಾಮೀಜಿ ಮಾತನಾಡಿದರು
ಐಗಳಿ ಸಮೀಪದ ಕಕಮರಿ ಗ್ರಾಮದ ಲಿಂಗೈಕ್ಯ ಮುರಿಗೆವ್ವ ಅಜ್ಜಿಯ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಸ್ವಾಮೀಜಿ ಮಾತನಾಡಿದರು   

ಐಗಳಿ: ‘ಮನುಷ್ಯನು ಜ್ಞಾನ, ದಾನಗಳಿಂದ ದೊಡ್ಡವನಾಗುತ್ತಾನೆ. ಶರೀರ ಬೆಳೆಯಲು ಆಹಾರ ಬೇಕಾದಂತೆ ಸುಖ ಜೀವನಕ್ಕೆ ಜ್ಞಾನ ಅವಶ್ಯ’ ಎಂದು ಡಾ. ಬಸವರಾಜ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಕಕಮರಿ ಗ್ರಾಮದಲ್ಲಿ ಲಿಂಗೈಕ್ಯ ಮುರಿಗೆವ್ವ ಅಜ್ಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನನ, ಮರಣಗಳು ಯೋಗ, ಭೋಗಗಳಿಗೆ ಹೊಣೆಯಲ್ಲ. ಅದಕ್ಕಾಗಿ ಚಿಂತಿಸಬೇಕಾಗಿಯೂ ಇಲ್ಲ. ಪಾರಮಾರ್ಥ ಗುರುಸೇವೆ ಹಾಗೂ ಜ್ಞಾನಕ್ಕಾಗಿ ಜೀವನ ಮೀಸಲಿಡಬೇಕು’ ಎಂದರು.

ADVERTISEMENT

‘ಈ ಶರೀರ ತಂದೆ-ತಾಯಿ ಕೊಟ್ಟ ಭಿಕ್ಷೆಯಾಗಿದೆ. ಅವರ ಋಣ ತೀರಿಸುವುದು ಮಕ್ಕಳ ಕರ್ತವ್ಯ. ಆದರೆ ಆಸ್ತಿಗಾಗಿ ತಂದೆ ತಾಯಿಗಳನ್ನು ಹೊಡೆಯುವುದು, ತಿರಸ್ಕರಿಸುವುದು ಇತ್ತೀಚೆಗೆ ಹೆಚ್ಚಾಗಿರುವದು ಅಜ್ಞಾನದ ಪ್ರತೀಕವಾಗಿದೆ. ದೇವರ ಗುಡಿಗೆ ಹೋಗಿ ಅಡ್ಡ ಬೀಳುವ ಮೊದಲು ತಂದೆ ತಾಯಿ ಸೇವೆ ಮಾಡಿದರೆ ಪುಣ್ಯ ಬರುತ್ತದೆ’ ಎಂದರು.

ನಂದಗಾಂವ ಭೂ ಕೈಲಾಸ ಪೀಠಾಧ್ಯಕ್ಷ ಮಹಾದೇವ ಮಹಾರಾಜರು ‘ಗಿರಿಯು ಗಾಳಿ, ಮಳೆಗೆ ಅಂಜದೇ ದೃಢವಾಗಿ ನಿಂತಂತೆ ಮನುಷ್ಯ ಕೂಡ ನಿಂದೆ, ಅಪನಿಂದನೆಗಳಿಗೆ ಹೆದರಬಾರದು. ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೇ ಅಚಲನಾಗಿರಬೇಕು. ವೈರಾಗ್ಯ ಇಲ್ಲದ ಪಾರಮಾರ್ಥವು ಕಟ್ಟಿದ ನಾಯಿ ಬೊಗಳಿದಂತಾಗುತ್ತದೆ. ಮನಃಶುದ್ದಿಯಿಂದ ಪಾರಮಾರ್ಥದಲ್ಲಿ ಪಾಲ್ಗೊಂಡು ಪಾವನರಾಗಬೇಕು’ ಎಂದರು.

ಜತ್ತ ಮರುಳಶಂಕರ ದೇವರು, ಯಕ್ಕಂಚಿಯ ಗುರುಪಾದೇಶ್ವರ ಸ್ವಾಮೀಜಿ, ಹೊನವಾಡದ ಬಾಬುರಾವ ಮಹಾರಾಜರು, ಶಾಂತಿ ಕುಟೀರದ ಶಿವಾನಂದ ಮಹಾರಾಜರು, ಗಂಗಣ್ಣ ಶರಣರು ಪ್ರವಚನ ನೀಡಿದರು.

ತಿಕೋಟಾದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಪ್ಪುಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಗುರಪ್ಪ ದಾಶ್ಯಾಳ, ಅಪ್ಪಾಸಾಬ ವಾಲಿ, ಲಕ್ಷ್ಮಣ ಗುರಕಿ, ರಾಚಪ್ಪ ತಂಗಡಿ, ಎಸ್.ಎಂ. ಜನಗೌಡ, ಈಶ್ವರ ಬಾಗೇವಾಡಿ, ಗುರುಶಾಂತಯ್ಯ ಕರಡಿಮಠ, ಗಿರಮಲ್ಲ ಜನಗೌಡ ಇದ್ದರು.

ಈರಣ್ಣ ವಾಲಿ ಸ್ವಾಗತಿಸಿದರು. ರಾಜೇಂದ್ರ ವಾಲಿ ನಿರೂಪಿಸಿದರು. ಶಿವಾನಂದ ವಾಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.