ADVERTISEMENT

ಮೇಲ್ಸೇತುವೆ ಪೂರ್ಣಕ್ಕೆ 60 ದಿನ ಗಡುವು

ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹೇಳಿಕೆ, ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 8:57 IST
Last Updated 11 ಫೆಬ್ರುವರಿ 2018, 8:57 IST
ಬೆಳಗಾವಿಯ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶನಿವಾರ ವೀಕ್ಷಿಸಿದರು. ಸಂಸದ ಸುರೇಶ ಅಂಗಡಿ ಇದ್ದಾರೆ
ಬೆಳಗಾವಿಯ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶನಿವಾರ ವೀಕ್ಷಿಸಿದರು. ಸಂಸದ ಸುರೇಶ ಅಂಗಡಿ ಇದ್ದಾರೆ   

ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು 60 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಇಲಾ ಖೆಯ ಎಂಜಿನಿಯರುಗಳಿಗೆ ಸೂಚನೆ ನೀಡಿದರು.

ಮೇಲ್ಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಅವರು, ಸಂಸದ ಸುರೇಶ ಅಂಗಡಿ ಅವರ ಬಯಕೆಯಂತೆ ಏಪ್ರಿಲ್‌ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಹೇಳಿದರು.

ನಗರದ ಕಪಿಲೇಶ್ವರದ ಬಳಿ ಮೇಲ್ಸೇತುವೆ ಪೂರ್ಣಗೊಳಿಸಲಾಗಿದೆ. ಹಳೆಯ ಪಿ.ಬಿ ರಸ್ತೆಯ ಮೇಲ್ಸೇತುವೆ ಕಾಮಗಾರಿ ನಡೆದಿದೆ. ರೈಲ್ವೆ ನಿಲ್ದಾಣದ ಬಳಿಯ ಮೂರನೇ ಮೇಲ್ಸೇತುವೆಯ ಕಾಮಗಾರಿ ನಡೆದಿದ್ದು, ಜೂನ್‌ ತಿಂಗಳ ಗಡುವು ಇದಕ್ಕಿದೆ. ಅಷ್ಟರೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಕಾಂಗ್ರೆಸ್‌ ನಿರ್ಲಕ್ಷ್ಯ: ರೈಲ್ವೆ ಸೇರಿದಂತೆ ವಿವಿಧ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. 50 ವರ್ಷ ಸರ್ಕಾರ ಆಳಿದ ಕಾಂಗ್ರೆಸ್‌ ಪಕ್ಷದವರಿಗೆ ಈ ಸಮಸ್ಯೆಗಳು ಕಾಣಿಸಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಇಂತಹ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಜನರಿಗೆ ಸೌಲಭ್ಯಗಳನ್ನು ತಲುಪಿಸಲು ಬದ್ಧರಾಗಿದ್ದಾರೆ ಎಂದು ತಿಳಿಸಿದರು.

ರೈಲ್ವೆ ಖಾತೆ ಮಾಜಿ ಸಚಿವ ಸದಾನಂದ ಗೌಡ, ಸಂಸದ ಸುರೇಶ ಅಂಗಡಿ ಅವರ ಪ್ರಯತ್ನದ ಫಲವಾಗಿ ಮೇಲ್ಸೇತುವೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೈನಿಕರನ್ನು ಕೂಡ ಬಳಸುತ್ತೇವೆ ಎಂದರು.

ನಿಲ್ದಾಣಕ್ಕೆ ಹೊಸ ಸ್ಪರ್ಶ:1924ರಲ್ಲಿ ಇಲ್ಲಿ ನಡೆದ ಮೊದಲ ಕಾಂಗ್ರೆಸ್‌ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಪಾಲ್ಗೊಂಡಿದ್ದರು. ಈ ಪರಿಕಲ್ಪನೆ ಯನ್ನು (ಕಾನ್ಸೆಪ್ಟ್‌) ಆಧರಿಸಿ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲಾಗು ವುದು ಎಂದು ಪಿಯೂಷ್‌ ಹೇಳಿದರು.

ರೈಲ್ವೆ ಸೇವೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈಲ್ವೆ ನಿಲ್ದಾಣಗಳ ಆಧುನೀಕರಣ, ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳು, ಟಿಕೆಟ್‌ ಪಡೆಯಲು ತಂತ್ರಜ್ಞಾನದ ಬಳಕೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಂಡಿದ್ದು, ಸುಖಕರ ಪ್ರಯಾಣ ಹಾಗೂ ಸುರಕ್ಷತೆ ಸರ್ಕಾರದ ಆದ್ಯತೆ ಯಾಗಿದೆ. ದೇಶದ ಎಲ್ಲ ರೈಲ್ವೆ ನಿಲ್ದಾಣ ಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುವದು ಎಂದು ತಿಳಿಸಿದರು.

ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ, ಬೆಳಗಾವಿ ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಎಸ್. ಸುರೇಶ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.