ADVERTISEMENT

‘6 ತಿಂಗಳಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ’

​ಪ್ರಜಾವಾಣಿ ವಾರ್ತೆ
Published 7 ಮೇ 2018, 7:05 IST
Last Updated 7 ಮೇ 2018, 7:05 IST

ರಾಮದುರ್ಗ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳಲ್ಲಿ ಮಹದಾಯಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಈ ಭಾಗದ ರೈತರಿಗೆ ನೀರಾವರಿ ಭಾಗ್ಯವನ್ನು ಕಲ್ಪಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಿಸಿದರು.

ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡ ಪರ ಪಟ್ಟಣದಲ್ಲಿ ಭಾನುವಾರ ಸಂಜೆ ಮತಯಾಚನೆ ಮಾಡಿದ ನಂತರ ಮಾತನಾಡಿದ ಅವರು, ‘ಮಹದಾಯಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಆಸಕ್ತಿ ವಹಿಸಿರಲಿಲ್ಲ. ಹೀಗಾಗಿ ಮಹದಾಯಿ ಸಮಸ್ಯೆ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.

‘ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಆರ್‌ಎಸ್‍ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳನ್ನು ಕಗ್ಗೊಲೆ ಮಾಡಲಾಗುತ್ತಿದೆ. ಇಷ್ಟಿದ್ದರೂ ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಆರೋಪಿಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿ ಸೂಕ್ತ ಶಿಕ್ಷೆ ಕೊಡಿಸುತ್ತೇವೆ’ ಎಂದರು.

ADVERTISEMENT

‘ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಮತ್ತು ಪಾಕಿಸ್ತಾನದ ವಿಚಾರಗಳು ಒಂದೇ ಆಗಿವೆ. ರಾಜ್ಯದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಣೆ ಮಾಡದ ಸಿದ್ದರಾಮಯ್ಯ ಸರ್ಕಾರ ಟಿಪ್ಪುವಿನ ಜಯಂತಿ ಆಚರಣೆ ಮಾಡಿ ಪಾಕಿಸ್ತಾನದಿಂದ ಅಭಿನಂದನಾ ಟ್ವೀಟ್‌ಗಳನ್ನು ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

‘ರಾಜ್ಯದಲ್ಲಿ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರನ್ನು ಗೆಲ್ಲಿಸುತ್ತೇನೆಂದು ಹೇಳಿಕೊಳ್ಳುತ್ತ ಸುತ್ತಾಡುತ್ತಿದ್ದಾರೆ. ಚುನಾವಣೆ ಅಂಗಳದಿಂದ ಓಡಿ ಹೋದವರು ಯಾರನ್ನೂ ಗೆಲ್ಲಿಸಲು ಸಾಧ್ಯವಿಲ್ಲ. ಈ ಸಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

‘ಸಿದ್ದರಾಮಯ್ಯಗೆನವರು ಚಾಮುಂಡಿ ಕ್ಷೇತ್ರದಲ್ಲಿ ಸೋಲು ಖಚಿತ ಎಂಬ ಭೀತಿಯಲ್ಲಿ ಬಾದಾಮಿಗೆ ಬಂದಿದ್ದಾರೆ. ಆದರೆ ಬಾದಾಮಿಯಲ್ಲಿಯೂ ಬಿಜೆಪಿಯ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರನ್ನು ಸೋಲಿಸಲಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮಗೊಳ್ಳಲಿದೆ’ ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರಾಜ್ಯದಲ್ಲಿ 3500 ರೈತರ ಆತ್ಮಹತ್ಯೆಗಳು ನಡೆದರೂ ಸಿದ್ದರಾಮಯ್ಯ ಮಾತ್ರ ನಿದ್ರೆಯಿಂದ ಏಳುತ್ತಿಲ್ಲ ಎಂದು ದೂರಿದರು.

ಸಮಾರಂಭದಲ್ಲಿ ಸಂಸದ ಸುರೇಶ ಅಂಗಡಿ, ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡ ಇತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.