ADVERTISEMENT

ಸಾಂಬ್ರಾದಲ್ಲಿ 8 ಜಿಲ್ಲೆಗಳಿಗೆ ಲಸಿಕೆ ಹಂಚಿಕೆ

ರಸ್ತೆ ಮಾರ್ಗದ ಬದಲಿಗೆ ವಿಮಾನದಲ್ಲಿ ಪೂರೈಕೆ

ಎಂ.ಮಹೇಶ
Published 9 ಜನವರಿ 2021, 19:31 IST
Last Updated 9 ಜನವರಿ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಳಗಾವಿ: ಕೋವಿಡ್–19 ಲಸಿಕೆಯನ್ನು ರಸ್ತೆ ಮಾರ್ಗದ ಬದಲಿಗೆ ಅತ್ಯಂತ ವೇಗವಾಗಿ ಅಂದರೆ ವಿಮಾನದಲ್ಲಿ ತಲುಪಿಸುವುದಾಗಿ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದು, ಇದಕ್ಕಾಗಿ ಇಲ್ಲಿ ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಸ್ತೆ ಮಾರ್ಗದಲ್ಲಿ ಲಸಿಕೆ ಪೂರೈಕೆ ಆಗಬಹುದು ಎಂದು ಇಲ್ಲಿನ ಅಧಿಕಾರಿಗಳು ಭಾವಿಸಿದ್ದರು. ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಶುಕ್ರವಾರ ಬಂದಿರುವ ಸೂಚನೆ ಪ್ರಕಾರ ದೆಹಲಿಯಿಂದ ನೇರವಾಗಿ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಲಸಿಕೆ ಬಂದು ತಲುಪಲಿದೆ. ಅದಕ್ಕೆ ತಕ್ಕಂತೆ ವಿಮಾನನಿಲ್ದಾಣದಲ್ಲಿ ಹಾಗೂ ಅಲ್ಲಿಂದ ವ್ಯಾಕ್ಸಿನ್ ಡಿಪೊಗೆ ಲಸಿಕೆಯನ್ನು ತಂದು ಸಂಗ್ರಹಿಸಿಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿ ಹಾಗೂ ವ್ಯಾಕ್ಸಿನ್ ವ್ಯಾನ್ ಅನ್ನು ಸಜ್ಜುಗೊಳಿಸಲಾಗಿದೆ. ‘ಯಾವ ಕ್ಷಣದಲ್ಲಿ ಬೇಕಾದರೂ ಲಸಿಕೆ ಬರಬಹುದು; ಅದಕ್ಕೆ ಸಿದ್ಧವಾಗಿ’ ಎಂದು ನಿರ್ದೇಶನ ಬಂದಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿಂದಲೇ ನೇರವಾಗಿ:

ADVERTISEMENT

ಮೊದಲಿಗೆ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಆರೋಗ್ಯ ಸೇವಾ ಸಿಬ್ಬಂದಿಗೆ (ಕೊರೊನಾ ಸೇನಾನಿಗಳು) ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಆ ಸಿಬ್ಬಂದಿಯನ್ನು ನೋಂದಾಯಿಸುವ ಪ್ರಕ್ರಿಯೆಯೂ ಈಗಾಗಲೇ ನಡೆದಿದೆ. ಅಲ್ಲದೇ, ಅಣಕು ಕಾರ್ಯಾಚರಣೆಯನ್ನೂ ಮಾಡಲಾಗಿದೆ. ಬೆಳಗಾವಿಯೊಂದಿಗೆ ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಉತ್ತರ ಕನ್ನಡ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಿಗೂ ಇಲ್ಲಿಂದಲೇ ಲಸಿಕೆ ಹಂಚಿಕೆಯಾಗಲಿದೆ. ಇದಕ್ಕಾಗಿ ಆಯಾ ಜಿಲ್ಲೆಗಳಿಂದ ವ್ಯಾಕ್ಸಿನ್ ವ್ಯಾನ್ ಅನ್ನು ಸಜ್ಜಾಗಿ ಇಟ್ಟುಕೊಳ್ಳುವಂತೆ ಮತ್ತು ಸಾಂಬ್ರಾ ವಿಮಾನನಿಲ್ದಾಣದಿಂದಲೇ ನೇರವಾಗಿ ತೆಗೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಯಾವ ಜಿಲ್ಲೆಗೆ ಎಷ್ಟು ಡೋಸ್ ಹಂಚಿಕೆಯಾಗಿದೆ ಎನ್ನುವ ಮಾಹಿತಿ ಇನ್ನೂ ಅಧಿಕಾರಿಗಳಿಗೆ ಬಂದಿಲ್ಲ.

ಸಜ್ಜಾಗಲು ನಿರ್ದೇಶನ

5–6 ಗಂಟೆಗಳವರೆಗೆ ತಾಪಮಾನ ಕಾಯ್ದುಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆಯನ್ನು ವ್ಯಾಕ್ಸಿನ್ ವ್ಯಾನ್‌ನಲ್ಲಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಈ ಎಂಟು ಜಿಲ್ಲೆಗಳೂ ಸೇರಿ 2.50 ಲಕ್ಷದಿಂದ 4 ಲಕ್ಷ ಡೋಸ್‌ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ. ಬೆಳಗಾವಿಯ ವ್ಯಾಕ್ಸಿನ್ ಡಿಪೊ ರಾಜ್ಯಮಟ್ಟದ ಲಸಿಕಾ ಕೇಂದ್ರವಾಗಿ ಗುರುತಿಸಿದ್ದು, ಇಲ್ಲಿರುವ ಕೂಲರ್‌ನಲ್ಲಿ 13.50 ಲಕ್ಷ ಡೋಸ್‌ನಷ್ಟು ಲಸಿಕೆಯನ್ನು ಸಂಗ್ರಹಿಸಿಡಬಹುದಾಗಿದೆ. ಇನ್ನೊಂದು ಕೂಲರ್ ಹಾಗೂ ಫ್ರೀಜರ್‌ ಕೇಂದ್ರ ಸರ್ಕಾರದಿದ ಮಂಜೂರಾಗಿದ್ದು, ಶೀಘ್ರದಲ್ಲೇ ದೆಹಲಿಯಿಂದ ಬರುವ ನಿರೀಕ್ಷೆ ಇದೆ. ಆವುಗಳು 15 ಲಕ್ಷ ಡೋಸ್ ಸಂಗ್ರಹ ಸಾಮರ್ಥ್ಯ ಹೊಂದಿವೆ ಎಂದು ಮೂಲಗಳು ತಿಳಿಸಿವೆ.

‘ಕೋವಿಡ್-19 ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ವೈಜ್ಞಾನಿಕವಾಗಿ ಸಂಗ್ರಹಿಸುವುದಕ್ಕೆ ಬೇಕಾದ ತಯಾರಿಯೂ ನಡೆದಿದೆ. ಲಸಿಕೆ ಯಾವುದೇ ಕ್ಷಣದಲ್ಲಿ ಬರಬಹುದು ಎಂಬ ಮಾಹಿತಿ ಇದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.