ADVERTISEMENT

95ರ ಶಾಂತಪ್ಪಣ್ಣ ಮಿರಜಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 6:47 IST
Last Updated 3 ಆಗಸ್ಟ್ 2013, 6:47 IST

ಚಿಕ್ಕೋಡಿ:  `ನೇರ ನಡೆನುಡಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ ಶಾಂತಪ್ಪಣ್ಣ ಮಿರಜಿ ಅವರು  ಸಾಮಾಜಿಕ, ರಾಜಕೀಯ,  ಸಹಕಾರ ಮತ್ತು ಸಾಹಿತ್ಯಿಕ ಕ್ಷೇತ್ರಗಳ ಪ್ರಗತಿಗೆ ಸಲ್ಲಿಸಿದ ಸೇವೆ ಗುರುತರವಾಗಿದೆ' ಎಂದು ಆಧ್ಯಾತ್ಮಿಕ ಚಿಂತಕ ಸುರೇಂದ್ರ ಹೂಲಿ ಹೇಳಿದರು.

ಪಟ್ಟಣದ ಶಾಂತಪ್ಪಣ್ಣ ಮಿರಜಿ ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ ವಿವಿಧ ಸಂಘಸಂಸ್ಥೆಗಳು ಮತ್ತು ಕುಟುಂಬ ವರ್ಗದರ ಸಹಯೋಗದೊಂದಿಗೆ ಈಚೆಗೆ ಸಹಕಾರ ಮಹರ್ಷಿ ಶಾಂತಪ್ಪಣ್ಣ ಮಿರಜಿ ಅವರನ್ನು 95ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಶಾಂತಪ್ಪಣ್ಣ ಮಿರಜಿ ಅವರು ಶಿಕ್ಷಣ ಪ್ರಸಾರ, ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಬೆಳವಣಿಗೆಗೂ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ ಎಂದು ಹೇಳಿದರು.

ಇಳಿಯ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿರುವ ಶಾಂತಪ್ಪಣ್ಣ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ತತ್ವಾದರ್ಶಗಳಿಂದ ಯುವಜನಾಂಗಕ್ಕೆ ಮಾರ್ಗದರ್ಶಿಯಾಗಿದ್ದಾರೆ' ಎಂದರು.

ಶಾಂತಪ್ಪಣ್ಣ ಮಿರಜಿ ಪಟ್ಟಣ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಸಂಜಯ ರುದ್ರಗೌಡ ಪಾಟೀಲ, ಶಾಂತಪ್ಪಣ್ಣ ಮಿರಜಿ ಅವರ ಜನಪರ ಕಾಳಜಿಯನ್ನು ಕೊಂಡಾಡಿದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಮಾಜಿ ಅಧ್ಯಕ್ಷ ಧನ್ಯಕುಮಾರ ಗುಂಡೆ, ಪುರಸಭೆ ಸದಸ್ಯ ಪಿ.ಐ. ಕೋರೆ, ನರೇಂದ್ರ ನೇರ್ಲೆಕರ,  ವರ್ಧಮಾನ ಸದಲಗೆ, ಅನಿಲ ಸದಲಗೆ, ಸಿ.ಎಸ್. ಬಸರಗಿ, ಈರಣ್ಣ ಹಂಪಣ್ಣವರ, ಮಹಾವೀರ ಪಾಟೀಲ, ಪಿ.ಕೆ. ಶಹಾ, ರಾಜು ರೋಖಡೆ, ರಾಜು ರೋಖಡೆ, ರಾಜು ಬೋರಗಾಂವೆ, ಗಿರೀಶ ಕೋಳಿ, ವಿ.ಕೆ. ರೇವಣಕರ ಸೇರಿದಂತೆ ಅಪಾರ ಸಂಖ್ಯೆ ಅಭಿಮಾನಿಗಳು ಶಾಂತಪ್ಪಣ್ಣ ಮಿರಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಿ.ಎ. ಭೋಜಕರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.