ADVERTISEMENT

ಅರ್ಧ ದಶಕ ಸೇವೆಗೈದ ಜನನಾಯಕ: ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 5:00 IST
Last Updated 5 ಮಾರ್ಚ್ 2025, 5:00 IST
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಂದರ್ಭ
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಂದರ್ಭ   

ಚಿಕ್ಕೋಡಿ: ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಜನಸೇವೆಯಲ್ಲೇ ಸವೆಸಿದವರು. ಪ್ರಬುದ್ಧ ರಾಜಕಾರಣಿ, ತೂಕದ ವ್ಯಕ್ತಿತ್ವ, ಗ್ರಾಮೀಣ ಜನರ ಆಶಾಕಿರಣ ಎಂದೇ ಅವರ ವ್ಯಕ್ತಿತ್ವ ಗುಣಗಾಣ ಮಾಡುತ್ತಾರೆ.

ಶಾಸಕರಾಗಿ, ಸಚಿವರಾಗಿ, ಸಂಸದರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹೀಗೆ ರಾಜಕೀಯ ಕ್ಷೇತ್ರದ ಎಲ್ಲ ಮಜಲುಗಳಲ್ಲೂ ಅವರು ಯಶಸ್ಸು ಕಂಡವರು. ಅನುಭವದ ಖನಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದಾರೆ. ವಿವಿಧ ಖಾತೆಗಳ ಸಚಿವರಾಗಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಈಗಲೂ ಜಿಲ್ಲೆಯ ಜನರ ಮನದಲ್ಲಿವೆ. ಹುರಿ ಮೀಸೆಯ ಪ್ರಕಾಶ ಹುಕ್ಕೇರಿ ಅವರ ವ್ಯಕ್ತಿತ್ವ ಆಕರ್ಷಕವಾದದ್ದು.

ಅದರಲ್ಲೂ ಕಳೆದ ಮೂರು ವರ್ಷಗಳಿಂದ ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.

ADVERTISEMENT

2022–23 ರಿಂದ 2024–25ನೇ ಸಾಲಿನವರೆಗೆ ಒಟ್ಟು ಮೂರು ವರ್ಷಗಳ ಅವಧಿಯಲ್ಲಿ ನಾಲ್ಕೂ ಶೈಕ್ಷಣಿಕ ಜಿಲ್ಲಾ ವ್ಯಾಫ್ತಿಯಲ್ಲಿ ₹11.8 ಕೋಟಿ ವೆಚ್ಚದಲ್ಲಿ 84 ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳನ್ನು, ₹8.2 ಕೋಟಿ ಅನುದಾನದಲ್ಲಿ 58 ಸರ್ಕಾರಿ ಪ್ರೌಢಶಾಲಾ ಕೊಠಡಿಗಳನ್ನು, ₹11.9 ಕೋಟಿ ಅನುದಾನದಲ್ಲಿ 36 ಕಾಲೇಜು ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ.

ಹೀಗೆ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ₹31.97 ಕೋಟಿ ವೆಚ್ಚದಲ್ಲಿ 178 ಶಾಲಾ, ಕಾಲೇಜುಗಳ ಕೊಠಡಿಗಳನ್ನು ನಿರ್ಮಾಣ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ಬಯಲಲ್ಲಿ ಪಾಠ ಮಾಡುತ್ತಿದ್ದ, ಬಯಲಲ್ಲೇ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಹಾಗೂ ಬಯಲಲ್ಲೇ ಪಾಠ ಕೇಳುತ್ತಿದ್ದ ಸಹಸ್ರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಶಿಕ್ಷಕರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಕೊಠಡಿಗಳನ್ನು ನಿರ್ಮಾಣ ಮಾಡಿದ್ದೂ ಅಲ್ಲದೇ, ಸಾಕಷ್ಟು ಕಾಲೇಜುಗಳಲ್ಲಿ ಲ್ಯಾಪ್‌ಟಾಪ್‌ ಸೇರಿದಂತೆ ಅವಶ್ಯಕ ಉಪಕರಣಗಳನ್ನು ನೀಡಿದ್ದಾರೆ.

ಕೇವಲ ಮೂರು ವರ್ಷಗಳ ಅವಧಿಯಲ್ಲಿ (2022–23, 2023–24, 2024–25) ಇಷ್ಟೊಂದು ಅನುಕೂಲ ಮಾಡಿಕೊಟ್ಟಿರುವ ಪ್ರಕಾಶ ಹುಕ್ಕೇರಿ ಅವರು, ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಹಲವು ಪ್ರಗತಿಪರ ಕೆಲಸ ಕಾರ್ಯಗಳನ್ನು ಮಾಡುವ ನಿರೀಕ್ಷೆ ಕ್ಷೇತ್ರದ ಜನರದ್ದಾಗಿದೆ.

50 ವರ್ಷ ರಾಜಕೀಯ ಕ್ಷೇತ್ರದ ಅನುಭವ ಹೊಂದಿರುವ ಪ್ರಕಾಶ ಹುಕ್ಕೇರಿ ಅವರು ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಮೇರು ವ್ಯಕ್ತಿತ್ವ ಅವರದಾಗಿದ್ದರೂ ಸರಳ ಸ್ವಭಾವಿ
–ಸಂತೋಷ ಲಾಡ ಕಾರ್ಮಿಕ ಸಚಿವ
- ಚಿಕ್ಕೋಡಿ– ಸದಲಗಾ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಎರಡು ಕಣ್ಣುಗಳು ಇದ್ದಂತೆ. ಇವರಿಂದ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ
–ಅನಿಲ ಮಾನೆ ಪುರಸಭೆ ಸದಸ್ಯ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.