ADVERTISEMENT

ದಕ್ಷಿಣಕ್ಕೆ ತಾರತಮ್ಯ: ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 13:14 IST
Last Updated 22 ಜೂನ್ 2018, 13:14 IST
ಬೆಳಗಾವಿಯ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಗುರುವಾರ ಸಭೆ ನಡೆಸಿದರು
ಬೆಳಗಾವಿಯ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಗುರುವಾರ ಸಭೆ ನಡೆಸಿದರು   

ಬೆಳಗಾವಿ: ನೀರು ಪೂರೈಕೆಯಲ್ಲಿ ಇಲ್ಲಿನ ದಕ್ಷಿಣ ಮತಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಶಾಸಕ ಅಭಯ ಪಾಟೀಲ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಂಡರು.

ಗುರುವಾರ ಸಭೆ ನಡೆಸಿದ ಅವರು, ‘ಉತ್ತರ ಕ್ಷೇತ್ರದಲ್ಲಿ ಶೇ 65ರಷ್ಟು ನೀರು ಪೂರೈಕೆ ಆಗುತ್ತಿದೆ. ಆದರೆ, ದಕ್ಷಿಣ ಮತಕ್ಷೇತ್ರಕ್ಕೆ ಅನ್ಯಾಯವಾಗುತ್ತದೆ. ಸಮನಾಗಿ ನೀರು ಒದಗಿಸಬೇಕು’ ಎಂದು ಸೂಚಿಸಿದರು.

‘ಕ್ಷೇತ್ರದಲ್ಲಿ ಯಾವಾಗ ನೀರು ಬರುತ್ತದೆ ಎನ್ನುವುದೇ ಇಲ್ಲಿನ ನಿವಾಸಿಗಳಿಗೆ ಗೊತ್ತಾಗುವುದಿಲ್ಲ. ಸೋರಿಕೆ ಮತ್ತು ಪೂರೈಕೆ ಮೇಲೆ ಸಿಬ್ಬಂದಿ ನಿಗಾ ವಹಿಸುತ್ತಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನಿರ್ವಹಣೆ ಮಾಡುತ್ತೇವೆ ಎಂದರೆ ಸಮಸ್ಯೆ ಅರ್ಥ ಆಗುವುದಿಲ್ಲ. ಬಡಾವಣೆಗಳಲ್ಲಿ ಸುತ್ತು ಹಾಕಬೇಕು. ಆಗ, ಜನರ ಬವಣೆ ಅರ್ಥವಾಗುತ್ತದೆ’ ಎಂದು ತಾಕೀತು ಮಾಡಿದರು.

ADVERTISEMENT

‘ಉತ್ತರ, ದಕ್ಷಿಣ ಎಂದು ನೋಡಬೇಡಿ. ಎಲ್ಲರೂ ಮನುಷ್ಯರೇ. ಎಲ್ಲರಿಗೂ ನೀರು ಬೇಕು. ದಕ್ಷಿಣ ಕ್ಷೇತ್ರದಲ್ಲಿ ಸಮರ್ಪಕ ನೀರು ಪೂರೈಕೆಗಾಗಿ ಎಷ್ಟು ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಬೇಕು. 24x7 ನಿರಂತರ ನೀರು ಪೂರೈಕೆ ಯೋಜನೆ ನಗರದ ಎಲ್ಲ ವಾರ್ಡ್‌ಗಳಿಗೂ ವಿಸ್ತರಣೆ ಮಾಡಬೇಕು. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೂ ಚರ್ಚಿಸಲಾಗುವುದು. ಯೋಜನೆ ಕುರಿತು ಶೀಘ್ರವೇ ಮರು ಟೆಂಡರ್ ಕರೆಯುವಂತೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.