ADVERTISEMENT

ಎಸಿಬಿ ಪ್ರಕರಣಗಳ ಸಂಖ್ಯೆ ಏರಿಕೆ; ವರ್ಷದಲ್ಲಿ 73 ದಾಖಲು

ಉತ್ತರ ವಲಯ– ಬೆಳಗಾವಿ;

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 19:30 IST
Last Updated 23 ಡಿಸೆಂಬರ್ 2019, 19:30 IST
ಎಸಿಬಿ ಲಾಂಛನ
ಎಸಿಬಿ ಲಾಂಛನ   

ಬೆಳಗಾವಿ: ಭ್ರಷ್ಟಾಚಾರ ನಿಗ್ರಹಿಸುವ ಉದ್ದೇಶದಿಂದ ಸ್ಥಾಪನೆಯಾಗಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಲ್ಲಿಕೆಯಾಗುತ್ತಿರುವ ದೂರುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಉತ್ತರ ವಲಯದ ಎಸಿಬಿಯಲ್ಲಿ ಈ ವರ್ಷ 73 ಪ್ರಕರಣಗಳು ದಾಖಲಾಗಿವೆ. ಎಸಿಬಿ ಸ್ಥಾಪನೆಯಾದಾಗಿನಿಂದ ಇದುವರೆಗೆ ಒಟ್ಟು 194 ಪ್ರಕರಣಗಳು ದಾಖಲಾಗಿವೆ.

ಸರ್ಕಾರಿ ವ್ಯವಸ್ಥೆಯನ್ನು ಹಾಳುಗೆಡುತ್ತಿರುವ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕೆನ್ನುವ ಉದ್ದೇಶದಿಂದ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿತ್ತು.

ಆರಂಭದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದ್ದರೂ, ನಂತರದ ದಿನಗಳಲ್ಲಿ ಜನರು ಇದನ್ನು ಸ್ವೀಕರಿಸಿದರು. ಪ್ರತಿವರ್ಷ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ, ಇದು ವೇದ್ಯವಾಗುತ್ತದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಹಾಗೂ ಧಾರವಾಡ ಜಿಲ್ಲೆಯ ವ್ಯಾಪ್ತಿಯನ್ನು ಉತ್ತರ ವಲಯ ಎಸಿಬಿ ಹೊಂದಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿ–ಧಾರವಾಡ ಕಮಿಷನರೇಟ್‌ ವ್ಯಾಪ್ತಿಯೂ ಇದರೊಳಗೆ ಸೇರಿದೆ.

ADVERTISEMENT

2019ರ ಜನವರಿಯಿಂದ ಡಿಸೆಂಬರ್‌ 20ರವರೆಗೆ ಒಟ್ಟು 73 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 47– ದೂರಿನ ಮೇರೆಗೆ ಟ್ರ್ಯಾಪ್‌ ಮಾಡಿರುವುದು, 10– ಅಧಿಕಾರಿಗಳ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ದಾಳಿ, 10– ಸರ್ಕಾರಿ ಕಚೇರಿಗಳ ಮೇಲೆ ದಾಳಿ, 2– ನ್ಯಾಯಾಲಯ ಶಿಫಾರಸ್ಸು ಮಾಡಿದ ಪ್ರಕರಣಗಳು, 4– ವಿವಿಧ ಇಲಾಖೆಗಳ ಮುಖ್ಯಸ್ಥರ ಕೋರಿಕೆ ಮೇರೆಗೆ ದಾಳಿ ಮಾಡಿದ ಪ್ರಕರಣಗಳು. ಒಟ್ಟು 73 ಪ್ರಕರಣಗಳು ದಾಖಲಾಗಿವೆ.

ಹೆಚ್ಚುತ್ತಿದೆ ಜನಜಾಗೃತಿ:

ಸರ್ಕಾರಿ ಸೇವೆಗಳನ್ನು ಒದಗಿಸಿಕೊಡುವುದು ಅಧಿಕಾರಿಗಳ ಕೆಲಸ. ಅದಕ್ಕಾಗಿ ಅವರಿಗೆ ಸಂಬಳ ನೀಡಲಾಗುತ್ತದೆ. ಇಷ್ಟಾಗಿಯೂ ಯಾವುದಾದರೂ ಅಧಿಕಾರಿ ಹಣಕ್ಕಾಗಿ ಅಥವಾ ಇನ್ನಾವುದಾದರೂ ವಸ್ತುವಿನ ಬೇಡಿಕೆ ಇಟ್ಟರೆ ಅವರ ವಿರುದ್ಧ ಎಸಿಬಿಗೆ ದೂರು ಸಲ್ಲಿಸಬಹುದು ಎನ್ನುವ ಅರಿವು ಇತ್ತೀಚೆಗೆ ಜನರಲ್ಲಿ ಹೆಚ್ಚುತ್ತಿರುವುದು ಕಂಡುಬಂದಿದೆ.

ತರಹೇವಾರಿ ದೂರು:

ಜನರು ತಾವೇ ಸ್ವತಃ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ, ದೂರು ಸಲ್ಲಿಸುತ್ತಿದ್ದಾರೆ. ಕೇವಲ ಹಣದ ಬೇಡಿಕೆಯಷ್ಟೇ ಅಲ್ಲದೇ, ಇತರ ವಸ್ತುಗಳ ಬೇಡಿಕೆಯನ್ನು ಅಧಿಕಾರಿಗಳು ಮಂಡಿಸುತ್ತಿರುವುದು ಕಂಡುಬಂದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ಕಂದಾಯ ಅಧಿಕಾರಿಯೊಬ್ಬರು ಮ್ಯುಟೇಷನ್‌ ಬಳಿಕ ಜಮೀನಿಗೆ ಹೆಸರು ಹಚ್ಚಲು 2 ಕುರ್ಚಿಗಳ ಬೇಡಿಕೆ ಇಟ್ಟಿದ್ದರು. ಇಲ್ಲಿ ಹಣದ ಬೇಡಿಕೆ ಇರಲಿಲ್ಲ. ಆದರೆ, ಆಮಿಷದ ರೂಪದಲ್ಲಿ ಕುರ್ಚಿ ಬೇಡಿಕೆ ಇಟ್ಟಿದ್ದರು. ಎಸಿಬಿ ದಾಳಿ ಮಾಡಿ, ಕುರ್ಚಿ ಸಮೇತ ಅಧಿಕಾರಿಯನ್ನು ಬಂಧಿಸಿದ್ದರು. ಅಧಿಕಾರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಜನರಿಂದ ಲಂಚ ಪಡೆಯುವುದು ಒಂದೆಡೆಯಾದರೆ, ತಮ್ಮ ಅಧೀನ ಅಧಿಕಾರಿಗಳ ಕೆಲಸ ಮಾಡಿಕೊಡಲು ಲಂಚ ಪಡೆಯುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಕೆಎಸ್‌ಆರ್‌ಟಿಸಿಯಲ್ಲಿ ತಮ್ಮ ಅಧೀನ ಅಧಿಕಾರಿಯೊಬ್ಬರ ವೈದ್ಯಕೀಯ ವೆಚ್ಚಗಳ ಕ್ಲೇಮು ಪಾಸ್ ಮಾಡಲು, ಸರ್ವೀಸ್‌ ರೆಕಾರ್ಡ್‌ ಬುಕ್‌ನಲ್ಲಿ ಅವರ ಸೇವೆಯನ್ನು ನಮೂದಿಸಲು, ರಜೆ ನೀಡಲು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಲಂಚ ಪಡೆಯುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಇಂತಹ ಅಧಿಕಾರಿಗಳನ್ನು ಎಸಿಬಿ ತಂಡ ಬಂಧಿಸಿ, ಕಾನೂನು ಕ್ರಮ ಜರುಗಿಸಿದೆ.

ಯಾವುದಕ್ಕೆಲ್ಲಾ ದೂರು:

‘ಸರ್ಕಾರಿ ಹಾಗೂ ಸರ್ಕಾರದ ಅನುದಾನದಿಂದ ನಡೆಯುವ ಸಂಸ್ಥೆಗಳಲ್ಲಿ ಭ್ರಷ್ಟಾಚಾರಗಳು ನಡೆದಿದ್ದರೆ, ಜನರ ಕೆಲಸ ಮಾಡಿಕೊಡಲು ಲಂಚಕ್ಕಾಗಿ ಒತ್ತಾಯಿಸಿದ್ದರೆ, ಸರ್ಕಾರಿ ಅಧಿಕಾರಿಗಳು ತಮ್ಮ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿದ್ದರೆ ಹಾಗೂ ಯಾವುದಾದರೂ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅಂತಹವರ ವಿರುದ್ಧ ಎಸಿಬಿ ದೂರು ಸಲ್ಲಿಸಬಹುದಾಗಿದೆ. ಈ ದೂರುಗಳ ಅನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ದಾಖಲಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತವಾಗಿಯೂ ಪ್ರಕರಣ ದಾಖಲಿಸಲು ಅವಕಾಶ ಇರುತ್ತದೆ’ ಎಂದು ಎಸಿಬಿ ಉತ್ತರ ವಲಯದ ಎಸ್ಪಿ ಅಮರನಾಥ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

’ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆಗಾಗ, ತಾಲ್ಲೂಕು ಮಟ್ಟಗಳಲ್ಲಿ ಜನಸಂಪರ್ಕ ಸಭೆಗಳನ್ನು ಏರ್ಪಡಿಸುತ್ತಿದ್ದೇವೆ. ಇದರ ಫಲವಾಗಿ ದೂರುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ’ ಎಂದರು.

ಸಂಪರ್ಕ ಸಂಖ್ಯೆ:

ಎಸ್ಪಿ– 9480806209, ಡಿಎಸ್‌ಪಿ–9480806235, ಪಿ.ಐ– 9480806299, 9480806321, ಬೆಳಗಾವಿ ಠಾಣೆ– 0831– 2422999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.