ಚಿಕ್ಕೋಡಿ: ‘ಜೈನ ಸಮುದಾಯದ ಏಳ್ಗೆಗಾಗಿ ಜೈನ ಸಮಾಜದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ನಾಲ್ಕು ಹಂತದ ಹೋರಾಟ ಮಾಡಲಾಗುವುದು’ ಎಂದು ಹುಬ್ಬಳ್ಳಿಯ ವರೂರಿನ ಆಚಾರ್ಯ ಗುಣಧರನಂದಿ ಮಹಾರಾಜ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಶಮನೇವಾಡಿ ಗ್ರಾಮದಲ್ಲಿ ಫೆ.8ರಂದು ಆಯೋಜಿಸಲಿರುವ ಜೈನ ಸಮ್ಮೇಳನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಜೈನ ಸಮುದಾಯವನ್ನು ಜಾಗೃತ ಮಾಡುವ ನಾಯಕರು ಬೇಕಾಗಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಮೇಲೆ ಅಪವಾದ ಬಂದಾಗ ಸಮಾಜದ ಯಾರೊಬ್ಬರೂ ಬೀದಿಗಿಳಿಯಲಿಲ್ಲ. ಸಮಾಜಕ್ಕಾಗುವ ಸಮಸ್ಯೆಗೆ ಪರಿಹಾರ ಕೇಳುವವರು ಇಲ್ಲದಂತಾಗಿದೆ. ಹೀಗಾಗಿಯೇ ಜೈನ ಸಮಾಜದ ಅಭಿವೃದ್ಧಿ ನಿಗಮವನ್ನು ಸರ್ಕಾರ ಕೂಡಲೇ ಸ್ಥಾಪಿಸಬೇಕು. ಪ್ರತಿವರ್ಷ ₹100 ಕೋಟಿ ನಿಧಿ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.
‘ನಿಗಮಕ್ಕಾಗಿ ಮೊದಲ ಹಂತವಾಗಿ ಆಯಾ ಜಿಲ್ಲೆಯಲ್ಲಿ ಜೈನ ಸಮಾಜದವರು ಸಂಬಂಧಿಸಿದ ಶಾಸಕರಿಗೆ ಮನವಿ ಸಲ್ಲಿಸುವುದು. ಬಳಿಕ ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಉಪವಾಸ ಕುಳಿತುಕೊಳ್ಳುವುದು ಹಾಗೂ ನಾಲ್ಕನೇಯದಾಗಿ ಬೆಂಗಳೂರಿನ ವಿಧಾನಸೌಧದ ಎದುರು ಧರಣಿ ಮಾಡಲು ಕೂಡ ತಾವು ಬದ್ಧ’ ಎಂದು ಹೇಳಿದರು.
‘ಜೈನ ಸಮಾಜ ಬಾಂಧವರು ಪಂಚಕಲ್ಯಾಣ ಮಾಡುವುದಕ್ಕಾಗಿ ಕೋಟಿಗಟ್ಟಲೇ ವೆಚ್ಚ ಮಾಡುತ್ತಿದ್ದು, ಇದರಲ್ಲಿ ಶೇ 50 ರಷ್ಟು ಹಣವನ್ನು ಉಳಿಸಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು, ವಸತಿ ನಿಲಯಗಳನ್ನು ಸ್ಥಾಪಿಸಲು ಒಗ್ಗೂಡಬೇಕಿದೆ’ ಎಂದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಲ್ಲಪ್ಪ ಮಗ್ಗೆನ್ನವರ, ಸಮಾಜದ ಮುಖಂಡರಾದ ಡಾ.ನೇಮಿನಾಥ ಮಗದುಮ್, ಅಣ್ಣಾಸಾಹೇಬ ಹವಲೆ, ಅರುಣ ಯಲಗುದ್ರಿ, ಬಿ.ಕೆ.ಪಾಟೀಲ ಕಲಬುರ್ಗಿ, ಸಂದೀಪ ಬೆಳಗಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.