ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ವಿಶ್ವಾಸ ವೈದ್ಯ ಮತ್ತು ಬಿ.ಬಿ.ಚಿಮ್ಮನಕಟ್ಟಿ ಅವರು ಬಾಗಿನ ಅರ್ಪಿಸಿದರು
ಸವದತ್ತಿ: ‘ಈ ವರ್ಷ ಸುರಿದ ಉತ್ತಮ ಮಳೆಯಿಂದ ನವಿಲುತೀರ್ಥ ಜಲಾಶಯ ತುಂಬಿದೆ. ಇದನ್ನೇ ನೆಚ್ಚಿಕೊಂಡವರಿಗೆ ಒಂದು ವರ್ಷದವರೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗುವುದು’ ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ತಾಲ್ಲೂಕಿನ ನವಿಲುತೀರ್ಥ ಜಲಾಶಯದ ಸ್ಥಳದಲ್ಲಿ ಮಂಗಳವಾರ ಗಂಗಾಪೂಜೆ ನೆರವೇರಿಸಿ, ಮಲಪ್ರಭೆಗೆ ಬಾಗಿನ ಅರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನವಿಲುತೀರ್ಥ ಜಲಾಶಯ ಉತ್ತರ ಕರ್ನಾಟಕದ ಜನರ ಜೀವನಾಡಿ. ರೇಣುಕಾ ಯಲ್ಲಮ್ಮ ದೇವಿ ಕೃಪೆಯಿಂದ ಇದು ಭರ್ತಿಯಾಗಿದ್ದು ಸಂತಸ ತಂದಿದೆ. ಈ ಬಾರಿ ಬೇಸಿಗೆಯಲ್ಲೂ ಜನ, ಜಾನುವಾರು ಮತ್ತು ಕೃಷಿ ಚಟುವಟಿಕೆಗೆ ನೀರಿನ ಕೊರತೆ ಎದುರಾಗದು’ ಎಂದರು.
‘ಮುಂದಿನ ದಿನಗಳಲ್ಲಿ ಜಲಾಶಯದಲ್ಲಿ ಉದ್ಯಾನ ನಿರ್ಮಿಸಲಾಗುವುದು. ವೀಕ್ಷಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಕೆಆರ್‌ಎಸ್ ಮಾದರಿಯಲ್ಲಿ ಜಲಾಶಯ ಅಭಿವೃದ್ಧಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.
ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ, ‘ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳ ಜನರು ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಈ ಜಲಾಶಯ ಅವಲಂಬಿಸಿದ್ದಾರೆ. ಇದು ಭರ್ತಿಯಾಗಿದ್ದು ಜನರು ಸಂತಸಗೊಂಡಿದ್ದಾರೆ’ ಎಂದರು.
ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ‘ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು, ನವಿಲುತೀರ್ಥ ಜಲಾಶಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾಶಿವಗೌಡ ಪಾಟೀಲ, ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಎ.ಎಲ್.ವಾಸನದ, ನವಿಲುತೀರ್ಥ ವೃತ್ತದ ಅಧೀಕ್ಷಕ ಎಂಜಿನಿಯರ್ ವಿ.ಎಸ್.ಮಧುಕರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ನವೀಕೃತ ಪ್ರವಾಸಿ ಮಂದಿರದ ಕಟ್ಟಡವನ್ನು ಲಕ್ಷ್ಮಿ ಹೆಬ್ಬಾಳಕರ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.