ADVERTISEMENT

‘ಅಪಘಾತ: ಕಾಮಗಾರಿ ಮಾಡಿದವರೇ ಹೊಣೆ’

ಎಚ್ಚರಿಕೆ ನೀಡಿದ ಎಡಿಜಿಪಿ ಅಲೋಕ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 15:32 IST
Last Updated 29 ಆಗಸ್ಟ್ 2024, 15:32 IST
ಅಲೋಕ್‌ ಕುಮಾರ್‌
ಅಲೋಕ್‌ ಕುಮಾರ್‌   

ಬೆಳಗಾವಿ: ‘ಅವೈಜ್ಞಾನಿಕ ರಸ್ತೆ ವಿಭಜಕ ಹಾಗೂ ಹಂಪ್ಸ್‌ಗಳಿಂದ ಅಪಘಾತ ಸಂಭವಿಸಿದರೆ, ಕಾಮಗಾರಿ ಮಾಡಿದ ಇಲಾಖೆಯ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು’ ಎಂದು ಎಡಿಜಿಪಿ ಅಲೋಕ್‌ಕುಮಾರ್‌ ಎಚ್ಚರಿಸಿದರು.

‘ರಸ್ತೆಗಳಲ್ಲಿ ಬಹಳಷ್ಟು ಕಡೆ ಅವೈಜ್ಞಾನಿಕವಾಗಿ ವಿಭಜಕ ಹಾಗೂ ಹಂಪ್ಸ್‌ ನಿರ್ಮಿಸಲಾಗಿದೆ. ಬಹಳಷ್ಟು ಅಪಘಾತಗಳು ಇದೇ ಕಾರಣಕ್ಕೆ ಸಂಭವಿಸುತ್ತಿವೆ. ಸಾಕಷ್ಟು ದೂರುಗಳೂ ಬಂದಿವೆ. ಲೋಕೋಪಯೋಗಿ ಇಲಾಖೆಯಿಂದ ಮಾಡಲಾದ ಕಾಮಗಾರಿಗಳ ಬಗ್ಗೆ ಸಾಕಷ್ಟು ತಕರಾರುಗಳು ಬಂದಿವೆ. ಇದು ಮುಂದುವರಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಚಾಲಕರ ಜವಾಬ್ದಾರಿ. ಮಳೆಗಾಲದಲ್ಲಿ ಬೈಕುಗಳು ಜಾರಿಬಿದ್ದು ಸಂಭವಿಸಿದ ಸಾವುಗಳೇ ಹೆಚ್ಚಾಗಿವೆ. ಸಮಪರ್ಕವಾದ ಹೆಲ್ಮೆಟ್‌ ಧರಿಸುವುದನ್ನು ಬಿಡಬಾರದು. ಇಂಥ ಅಪಘಾತಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದೂ ಹೇಳಿದರು.

ADVERTISEMENT

‘ಈ ಭಾಗದಲ್ಲಿ ನಿಪ್ಪಾಣಿ– ಮುಧೋಳ, ಬಾಚಿ, ಯರಗಟ್ಟಿ, ರಾಯಚೂರು ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಅಪಘಾತ ತಡೆಗಟ್ಟಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಯಾವ ರೀತಿ ವಾಹನ ಚಲಾಯಿಸಬೇಕು ಎಂಬ ಅರಿವು ಚಾಲಕರಿಗೂ ಇರಬೇಕು’ ಎಂದರು.

‘ಹಿಂಡಲಗಾ ಜೈಲಿನಲ್ಲಿರುವ ಅಪರಾಧಿ ಜಯೇಶ್ ಪೂಜಾರಿ ಕೊಲೆ ಬೆದರಿಕೆ ಹಾಕಿದ್ದ. ಈಗಾಗಲೇ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯಿಂದ ಇದೆಲ್ಲ ಸಾಧ್ಯವಿಲ್ಲ. ಆತನ ಹೇಳಿಕೆಗೆ ಹೆಚ್ಚು ಬೆಲೆ ಕೊಡಬೇಕಾಗಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಗರದಲ್ಲಿ ಆಟೊ ಮೀಟರ್‌ ಕಡ್ಡಾಯ ಮಾಡುವ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.