ADVERTISEMENT

‘ಮಹಾರಾಷ್ಟ್ರದ ಪುಸ್ತಕ ಅನುಚಿತ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:01 IST
Last Updated 27 ಜನವರಿ 2021, 16:01 IST

ಬೆಳಗಾವಿ: ‘ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಚಾಲ್ತಿ ಇರುವಾಗ ಮಹಾರಾಷ್ಟ್ರ ಸರ್ಕಾರ ಸಾಕ್ಷಿ ಆಗಬಹುದಾದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ತಂದಿದ್ದು ಅನುಚಿತ’ ಎಂದು ಧಾರವಾಡದ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಮತ್ತು ವಕೀಲ ರವೀಂದ್ರ ತೋಟಿಗೇರ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನ್ಯಾಯಾಲಯದ ಹೊರಗೆ ಪ್ರಕರಣದ ಬಗ್ಗೆ ಮಾತಾಡುವುದು, ಮಹಾರಾಷ್ಟ್ರದವರಿಗೆ ನ್ಯಾಯಾಲಯ ಮತ್ತು ಕಾನೂನಿನ ಬಗ್ಗೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಅವರಿಗೆ ಪರಿಹಾರ ನ್ಯಾಯಾಲಯದಲ್ಲಿ ಆಗಬೇಕೋ ಅಥವಾ ಬೀದಿಯಲ್ಲಿ ಆಗಬೇಕೋ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.

‘ಆ ಪುಸ್ತಕಕ್ಕೆ ಸೂಕ್ತ ಕಾನೂನು ಚೌಕಟ್ಟಿನಲ್ಲಿ ಉತ್ತರ ನೀಡಲಾಗುವುದು. ಅವರು ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿದಾಗ ನಾವು ಕೇವಲ ಅದಕ್ಕೆ ಪ್ರತಿಕ್ರಿಯೆ ಕೊಟ್ಟು ಸಮ್ಮನಾಗಬೇಕು. ಅಹಂಕಾರಕ್ಕೆ ಉದಾಸೀನ ಮದ್ದು ಎನ್ನುವ ತತ್ವ ಪಾಲಿಸಿದರೆ ಅವರು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವವರೆಗೆ ಯಾವುದೇ ಹೇಳಿಕೆ ಏನೂ ಮಾಡದು. ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಗೆ ಹಾಗೂ ಕೃತಿ ಬಿಡುಗಡೆ ಮಾಡಿ ಪ್ರಚೋದನಾತ್ಮಕವಾಗಿ ಮಾತನಾಡಿರುವುದಕ್ಕೆ ಕವಡೆ ಕಾಸಿನ ಕಿಮತ್ತಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.