
ಬೆಳಗಾವಿ: ಮನೆಯಿಂದಲೇ ಅಗರಬತ್ತಿ ಪ್ಯಾಕಿಂಗ್ ಮಾಡಿ ಕೊಟ್ಟರೆ ಸಾವಿರಾರು ರೂಪಾಯಿ ದುಡಿಯಬಹುದು ಎಂದು ಆಮಿಷ ಒಡ್ಡಿದ ವ್ಯಕ್ತಿಯೊಬ್ಬ ನೂರಾರು ಮಹಿಳೆಯರಿಗೆ ವಂಚನೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿ, ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಮಂಗಳವಾರ ನಗರ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದರು.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಬಾಬಾಸಾಹೇಬ ಕೋಲೇಕರ ಎಂಬಾತ ಅಜಯ್ ಪಾಟೀಲ ಎಂಬ ಸುಳ್ಳು ಹೆಸರಿನಲ್ಲಿ ಈ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ವರ್ಕ್ ಫ್ರಂ ಹೋಂ’ ಪದ್ಧತಿ ಅಡಿ ಕೆಲಸ ಮಾಡಿ ಕೊಡಬೇಕು. ತಾವು ಕಚ್ಚಾ ಸಾಮಗ್ರಿ ನೀಡಿದರೆ ಅಗರಬತ್ತಿ ತಯಾರಿಸಿ ಕೊಡಬೇಕು. ಅದನ್ನು ಮಾರಾಟ ಮಾಡಿ ಬಂದ ಲಾಭದಲ್ಲಿ ಸಂಬಳ ನೀಡಲಾಗುವುದು. ಇದಕ್ಕಾಗಿ ಪ್ರತಿಯೊಬ್ಬರೂ ಗುರುತಿನ ಚೀಟಿ ಮಾಡಿಸಬೇಕು. ಅದಕ್ಕೆ ತಲಾ ₹2,500 ಭರಿಸಬೇಕು ಎಂದು ಆರೋಪಿ ಆಮಿಷ ಒಡ್ಡಿದ್ದ. ಹಣ ಗಳಿಸುವ ಆಸೆಗೆ ಕೆಲವು ಮಹಿಳೆಯರು ಹತ್ತಿಪ್ಪತ್ತು ಕಾರ್ಡುಗಳನ್ನೂ ಮಾಡಿಕೊಂಡಿದ್ದಾರೆ.
ಕೆಲವು ದಿನ ಕೆಲಸ ನೀಡಿದಂತೆ ಮಾಡಿದ ಆರೋಪಿ ನಂತರ ಹಣದ ಸಮೇತ ಪರಾರಿಯಾಗಿದ್ದಾನೆ. ಈಗ ಕಚ್ಚಾ ಸಾಮಗ್ರಿಯೂ ಇಲ್ಲ, ಉದ್ಯೋಗವೂ ಇಲ್ಲ, ನೀಡಿರುವ ಹಣವೂ ಇಲ್ಲ ಎಂಬಂತಾಗಿದೆ. ತಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದೂ ಆಗ್ರಹಿಸಿದ್ದಾರೆ.
‘ಇದೊಂದು ಚೈನ್ ಮಾರ್ಕೆಟ್ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರೂ ಇನ್ನಿಬ್ಬರು ಮಹಿಳೆಯರನ್ನು ಕರೆತಂದು ತುರುತಿನ ಚೀಟಿ ಕೊಡಿಸಿದ್ದೇವೆ. ಅವರೀಗ ನಮ್ಮನ್ನೇ ಹಣ ಕೊಡಿ ಎಂದು ಕಾಡುತ್ತಿದ್ದಾರೆ. ನನ್ನ ಪತಿ ತೀರಿಕೊಂಡಿದ್ದರಿಂದ ಮನೆಯ ಆದಾಯ ನಿಂತಿದೆ. ಮನೆಯಿಂದಲೇ ಕೆಲಸ ಮಾಡಿ ಮಕ್ಕಳನ್ನು ಸಾಕಬೇಕು ಎಂದು ನಾನು ಈ ಕೆಲಸಕ್ಕೆ ಕೈ ಹಾಕಿದೆ. ಆದರೆ, ಈಗ ಮೋಸ ಹೋಗಿದ್ದೇನೆ. ಆರೋಪಿಯನ್ನು ತಕ್ಷಣ ಬಂಧಿಸಬೇಕು’ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು.
‘ಮಹಿಳಾ ಗೃಹ ಉದ್ಯೋಗ ಸಮೂಹ ಸ್ಥಾಪಿಸಿದ ಬಾಬಾಸಾಹೇಬ್ ಹೆಣ್ಣುಮಕ್ಕಳನ್ನು ಸುಲಭವಾಗಿ ನಂಬಿಸಿದ್ದಾನೆ. ಮನೆಗಳಿಗೆ ಗಂಧದ ಕಡ್ಡಿ ಪೂರೈಸಲು ಸುಮಾರು 6 ಆಟೊಗಳನ್ನೂ ಬಾಡಿಗೆ ಪಡೆದಿದ್ದ. ಇದರಲ್ಲಿ ನನ್ನ ಪತ್ನಿ ಕೂಡ ₹20 ಸಾವಿರ ಹೂಡಿಕೆ ಮಾಡಿದ್ದಾಳೆ’ ಎಂದು ಆಟೊ ಚಾಲಕರೊಬ್ಬರು ಅಳಲು ತೋಡಿಕೊಂಡರು.
‘ಮನೆಯಿಂದಲೇ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಬಿದ್ದು ಮಹಳಷ್ಟು ಮಹಿಳೆಯರು ಇಲ್ಲಿ ಮೋಸ ಹೋಗಿದ್ದಾರೆ. ಲಕ್ಷ್ಮೀ ಕಾಂಬಳೆ ಎನ್ನುವವರು ಶಹಾಪುರ ಠಾಣೆಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಶೀಘ್ರ ಪತ್ತೆ ಮಾಡಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಹೇಳಿದರು.
‘ಒಂದೊಂದು ಗುರುತಿಸನ ಚೀಟಿಗೆ ₹2,500 ನಿಗದಿ ಮಾಡಿದ್ದ. ಕೆಲವರು ಹತ್ತಾರು ಚೀಟಿ ತೆಗೆದುಕೊಂಡು ಸಾಕಷ್ಟು ಹಣ ಹೂಡಿದ್ದಾರೆ. ನೂರಾರು ಮಹಿಳೆಯರು ಸೇರಿದ್ದರಿಂದ ಇದು ಕೋಟ್ಯಂತರ ವಂಚನೆ ಆಗಿದೆ’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.