ADVERTISEMENT

ಸತ್ಯಾಂಶ ತಿಳಿಸದಿದ್ದರೆ ಬೆಳಗಾವಿ, ಖಾನಾಪುರ ಬಂದ್ ಎಚ್ಚರಿಕೆ

ಖಾನಾಪುರದ ಯುವಕ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 13:49 IST
Last Updated 3 ಅಕ್ಟೋಬರ್ 2021, 13:49 IST

ಬೆಳಗಾವಿ: ‘ಖಾನಾಪುರದ ಯುವಕ ಅರ್ಬಾಜ್ ಮುಲ್ಲಾ ಸಾವಿನ ಪ್ರಕರಣದ ಸತ್ಯಾಂಶವನ್ನು ಬುಧವಾರದ ಒಳಗೆ ಜನರ ಮುಂದೆ ಇಡಬೇಕು. ಇಲ್ಲದಿದ್ದರೆ ಶುಕ್ರವಾರ(ಅ.8)ದಂದು ಬೆಳಗಾವಿ ಮತ್ತು ಖಾನಾಪುರ ಬಂದ್ ಮಾಡಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಐಎಂಐಎಂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಲತೀಫ್‌ಖಾನ್‌ ಪಠಾಣ ಎಚ್ಚರಿಕೆ ನೀಡಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಆ ಯುವಕನ ಹತ್ಯೆ ಪ್ರಕರಣವನ್ನು ತಿರುಚುವ ಯತ್ನ ನಡೆಯುತ್ತಿದೆ. ಹೀಗಾಗಿ ಈ ವಿಚಾರವನ್ನು ‍ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಕರ್ನಾಟಕ ಉಸ್ತುವಾರಿ ಮಹ್ಮದ್ ಸಲೀಂ ಅವರ ಗಮನಕ್ಕೆ ತಂದಿದ್ದೇನೆ’ ಎಂದರು.

‘ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಡಿಎಸ್‍ಪಿ ಪುಷ್ಪಲತಾ ಅವರನ್ನು ಭೇಟಿಯಾಗಿದ್ದೇವೆ. ತನಿಖೆಗೆ ಒತ್ತಾಯಿಸಿದ್ದೇವೆ. ಪ್ರಾಮಾಣಿಕವಾಗಿ ತನಿಖೆ ಪೂರ್ಣಗೊಳಿಸುತ್ತೇವೆ; ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ. ಬುಧವಾರದವರೆಗೆ ಸತ್ಯಾಂಶ ಹೊರ ಬಾರದಿದ್ದರೆ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಆಗಮಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಅರ್ಬಾಜ್ ಮನೆಗೆ ತೆರಳಿ ಅವರ ತಾಯಿಗೆ ಧೈರ್ಯ ತುಂಬಿದ್ದೇವೆ. ನಮ್ಮ ಪಕ್ಷದಿಂದ ಎಲ್ಲ ರೀತಿಯ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದ್ದೇವೆ’ ಎಂದರು.

‘ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಘಟನೆ ನಡೆಯುವ 3 ಗಂಟೆಗೆ ಮೊದಲು ಮೊಬೈನ್‌ ಫೋನ್‍ನಲ್ಲಿ ಮಾತನಾಡುವಾಗ ತುಂಬಾ ಭಯಭೀತನಾಗಿದ್ದ. ನನ್ನ ಮಗನನ್ನು ಪಿತೂರಿಯಿಂದ ಹತ್ಯೆ ಮಾಡಿದ್ದಾರೆ’ ಎಂದು ತಾಯಿ ತಿಳಿಸಿದ್ದಾರೆ. ಸಣ್ಣ ಪುಟ್ಟ ಕಾರಣಕ್ಕೆ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿರುವುದು ಬಹಳ ವಿಷಾದನೀಯ. ಆರೋಪಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರಪಾಲಿಕೆ ಸದಸ್ಯ ಶಾಹೀದ್ ಖಾನ್ ಪಠಾಣ, ಮುಖಂಡರಾದ ಅಯೂಬ್ ಜಕಾತಿ, ಆಲಂ ಸನದಿ, ಝೈನ್ ಡೋಣಿ, ನವೀದ್ ಜಮಾದಾರ್, ಇಮ್ರಾನ್ ಪೀರಜಾದೆ, ಶಾರೂಖ್ ಪಟೇಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.