ADVERTISEMENT

ಅಕ್ಕಲಕೋಟೆ | ಗಡಿ ಕನ್ನಡಿಗರ ಬೆನ್ನಿಗೆ ಪ್ರಾಧಿಕಾರ: ಬೇವಿನಮರದ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 15:59 IST
Last Updated 13 ಫೆಬ್ರುವರಿ 2025, 15:59 IST
ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನ ಕಾಮಗಾರಿಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಗುರುವಾರ ಪರಿಶೀಲಿಸಿದರು
ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನ ಕಾಮಗಾರಿಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಗುರುವಾರ ಪರಿಶೀಲಿಸಿದರು   

ಅಕ್ಕಲಕೋಟೆ (ಮಹಾರಾಷ್ಟ್ರ): ‘ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೆಚ್ಚಾಗಿರುವ ಪ್ರದೇಶದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಕನ್ನಡಿಗರು ನಿರಾಶೆಯಾಗುವ ಅಗತ್ಯವಿಲ್ಲ. ನಿಮ್ಮ ಬೆನ್ನಿಗೆ ಪ್ರಾಧಿಕಾರವು ಗಟ್ಟಿಯಾಗಿ ಸದಾ ನಿಲ್ಲಲಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಅಕ್ಕಲಕೋಟೆ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿದ ನಂತರ, ಆದರ್ಶ ಕನ್ನಡ ಬಳಗವು ಆಯೋಜಿಸಿದ ‘ಮಹಾರಾಷ್ಟ್ರ ಕನ್ನಡಿಗರ ಏಳಿಗೆ’ ಚರ್ಚಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

‘ಪ್ರಾಧಿಕಾರವು ಹಲವು ವರ್ಷಗಳಿಂದ ಗಡಿ ಭಾಗದ ಕನ್ನಡ ಪ್ರದೇಶಗಳ ಉನ್ನತೀಕರಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಆದರೆ, ಇದಕ್ಕೆ ಅನುದಾನದ ಅವಶ್ಯಕತೆ ಇದೆ. ಸದ್ಯಕ್ಕೆ ಇತಿಮಿತಿಯಲ್ಲಿ ಕೆಲಸಗಳನ್ನು ಸದ್ಯ ನಡೆಸಬೇಕಾಗಿದೆ’ ಎಂದರು.

ADVERTISEMENT

‘ಮಾರ್ಚ್ ತಿಂಗಳ ಕೊನೆಯವರೆಗೆ ಅಕ್ಕಲಕೋಟೆಯ ಕನ್ನಡ ಭವನ ಕಾಮಗಾರಿ ಪೂರ್ಣಗೊಳ್ಳಬೇಕು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದು ಈ ಭವನದ ಉದ್ಘಾಟನೆ ಮಾಡಲಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ತೋಳನೂರು ಮಠದ ಚನ್ನಮಲ್ಲ ಸ್ವಾಮೀಜಿ, ‘ಈ ಭಾಗದಲ್ಲಿ ಕನ್ನಡ ಪ್ರತಿಯೊಬ್ಬರ ಮನೆಯ ಮಾತಾಗಿದೆ. ಇಲ್ಲಿನ ಕನ್ನಡ ಶಾಲೆಗಳಿಗೆ, ಸಂಘ–ಸಂಸ್ಥೆಗಳಿಗೆ ಪ್ರಾಧಿಕಾರವು ಹೆಚ್ಚಿನ ಅನುದಾನ ನೀಡಬೇಕು’ ಎಂದು ಹೇಳಿದರು.

ಸಾಹಿತಿಗಳಾದ ಮಧುಮಾಲ ನಿಗಾಡೆ, ಪ್ರಕಾಶ್ ಮತ್ತಿಹಳ್ಳಿ, ಕಾರ್ಯನಿರ್ವಾಹಕ ಎಂಜಿನಿಯರ್‌ ಲಕ್ಷ್ಮಿಕಾಂತ ಬಿರಾದಾರ, ಸೋಮಶೇಖರ ಜಮಶೆಟ್ಟಿ, ಮಲಿಕಜಾನ್‌ ಶೇಖ್‌, ಸುರೇಶ ಶೆಟಗಾರ ಹಾಗೂ ಸಿದರಾಯ್ ಬಿರಾದಾರ್ ಮಾತನಾಡಿದರು.

ಚರ್ಚಾ ಕೂಟದ ಯಶಸ್ಸಿಗೆ ಬಸವರಾಜ ಧನಶೆಟ್ಟಿ, ಮಹೇಶ ಮೇತ್ರಿ, ಗುರುಬಸವ ವಗ್ಗೋಲಿ, ಚಿದಾನಂದ ಮಠಪತಿ, ಶಾಂತಮಲ್ಲಯ್ಯ ಸ್ವಾಮಿ ಹಾಗೂ ಪ್ರಶಾಂತ್ ಬಿರಾದಾರ ಶ್ರಮಿಸಿದರು.

ಅಕ್ಕಲಕೋಟೆ ಜತ್ತ ದಕ್ಷಿಣ ಸೊಲ್ಲಾಪುರ ಹಾಗೂ ಗಡಹಿಂಗ್ಲಜ್ ತಾಲ್ಲೂಕುಗಳು ಗಡಿನಾಡು ಆಗಿವೆ. ಆದರೆ ಸೌಕರ್ಯಗಳು ಮರೀಚಿಕೆಯಾಗಿವೆ
ಮಲಿಕಜಾನ್ ಶೇಖ್‌ ಅಧ್ಯಕ್ಷ ಆದರ್ಶ ಕನ್ನಡ ಬಳಗ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ವಿತರಿಸಿದ ಉಚಿತ ಕೈಪಿಡಿ ಆಶಾದಾಯಕ. ಆದರೆ ಮೂಲಸೌಕರ್ಯಗಳಿಗೂ ಆದ್ಯತೆ ನೀಡಬೇಕು
ಸೋಮಶೇಖರ್ ಜಮಶೆಟ್ಟಿ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.