ADVERTISEMENT

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಿದ್ಧತೆ

3 ಸ್ಥಾನಗಳಿಗೆ ಮತದಾನ; ಅಂಜಲಿ, ಅರವಿಂದ ಪಾಟೀಲ ಕಣದಲ್ಲಿರುವ ಪ್ರಮುಖರು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 10:19 IST
Last Updated 5 ನವೆಂಬರ್ 2020, 10:19 IST
ಬೆಳಗಾವಿಯ ಡಿಸಿಸಿ ಬ್ಯಾಂಕ್‌ ಕೇಂದ್ರ ಕಟ್ಟಡ
ಬೆಳಗಾವಿಯ ಡಿಸಿಸಿ ಬ್ಯಾಂಕ್‌ ಕೇಂದ್ರ ಕಟ್ಟಡ   

ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಮೂರು ನಿರ್ದೇಶಕರ ಸ್ಥಾನಗಳಿಗೆ ನ.6ರಂದು (ಶುಕ್ರವಾರ) ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ಚುನಾವಣೆ ನಡೆಯಲಿದೆ.

ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಬೇಕೆಂದು ಬಿಜೆಪಿ ಮುಖಂಡರು ಕಸರತ್ತು ನಡೆಸಿದ್ದರಾದರೂ ಸಫಲವಾಗಲು ಸಾಧ್ಯವಾಗಲಿಲ್ಲ.

ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಖಾನಾಪುರ, ರಾಮದುರ್ಗ ಮತ್ತು ನೇಕಾರರ ಸಹಕಾರ ಸಂಘಗಳ ಪ್ರತಿನಿಧಿ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ಮತ್ತು ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಕಣದಲ್ಲಿದ್ದಾರೆ. ರಾಮದುರ್ಗದಿಂದ ಭೀಮಪ್ಪ ಬೆಳವಣಿಕಿ ಮತ್ತು ಶ್ರೀಕಾಂತ ಡವಣ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ನೇಕಾರರ ಕ್ಷೇತ್ರದಿಂದ ಗಜಾನನ ಕ್ವಳ್ಳಿ ಮತ್ತು ಕೃಷ್ಣ ಅನಗೋಳಕರ ನಡುವೆ ಪೈಪೋಟಿ ಇದೆ.

ADVERTISEMENT

ಗೆದ್ದರೂ, ಸೋತರೂ ದಾಖಲೆಯೇ:ನಿರ್ದೇಶಕ ಸ್ಥಾನಕ್ಕೆ ಮಹಿಳೆಯೊಬ್ಬರು (ಡಾ.ಅಂಜಲಿ) ಸ್ಪರ್ಧಿಸಿರುವುದು ಇದೇ ಮೊದಲು. ಅವರು ಗೆದ್ದರೂ, ಸೋತರೂ ದಾಖಲೆಯೇ ಆಗಲಿದೆ. ಸಹಕಾರ ಕ್ಷೇತ್ರದಲ್ಲಿನ ಅವರ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ. ಪ್ರತಿ ಸ್ಪರ್ಧಿ ಅರವಿಂದ ಪಾಟೀಲ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ.

ಅಭ್ಯರ್ಥಿಗಳು ತಮ್ಮ ಬೆಂಬಲಿತ ಮತದಾರರನ್ನು ಮಹಾರಾಷ್ಟ್ರ ಹಾಗೂ ಗೋವಾದ ರೆಸಾರ್ಟ್‌ನಲ್ಲಿರಿಸಿದ್ದು, ಎಲ್ಲರೂ ಮತದಾನದಂದು ಇಲ್ಲಿಗೆ ಬರಲಿದ್ದಾರೆ.

‘ಮತದಾನಕ್ಕಾಗಿ ಅಗತ್ಯ ಸಿದ್ಧತೆ ಆಗಿದೆ. ತಲಾ ಒಂದು ಹೆಚ್ಚುವರಿ ಹಾಗೂ ಕೋವಿಡ್ ಮತಗಟ್ಟೆ ಸೇರಿ ಒಟ್ಟು ಐದು ಮತಗಟ್ಟೆಗಳನ್ನು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಗಟ್ಟೆಗೆ ಅಭ್ಯರ್ಥಿಗಳು, ಏಜೆಂಟ್, ಮತದಾರರು ಮತ್ತು ಸಿಬ್ಬಂದಿಗೆ ಮಾತ್ರ ಪ್ರವೇಶ ಅವಕಾಶವಿದೆ. ಎಲ್ಲರಿಗೂ ಗುರುತಿನ ಚೀಟಿ ನೀಡಲಾಗಿದೆ. ಮತಪತ್ರದ ಮೂಲಕ ಮತ ಚಲಾಯಿಸಲಿದ್ದಾರೆ. ಮತಗಟ್ಟೆಗೆ ಮೊಬೈಲ್, ಪೆನ್ ಅಥವಾ ಕ್ಯಾಮೆರಾ ತರುವಂತಿಲ್ಲ. ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಮತಗಟ್ಟೆ ಸಿದ್ಧಪಡಿಸಲಾಗಿದೆ’ ಎಂದು ಚುನಾವಣಾಧಿಕಾರಿ ಸಯೀದಾ ಅಫ್ರೀನಬಾನು ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂಜಾಗ್ರತಾ ಕ್ರಮ:‘ಕೋವಿಡ್ ಕಾರಣದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್‌ ಒದಗಿಸಲಾಗುವುದು. ಅಂತರ ಕಾಯ್ದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ 20 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಸಂಜೆ 4ರ ನಂತರ ಮತ ಎಣಿಕೆ ನಡೆಯಲಿದ್ದು, ಪೂರ್ಣಗೊಂಡ ಬಳಿಕ ಫಲಿತಾಂಶ ಘೋಷಿಸಲಾಗುವುದು. ಅಭ್ಯರ್ಥಿಗಳು ಕೂಡ ಮತದಾರರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ತಮ್ಮ ಸೊಸೈಟಿ ಪರವಾಗಿ ಒಬ್ಬರಿಗೆ, ನಿರ್ದೇಶಕರ ಚುನಾವಣೆಯಲ್ಲಿ ಮತದಾನಕ್ಕೆ ನಿಯೋಜಿಸಿರುತ್ತಾರೆ. ಅ.21ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಕಟಿಸಿರುವ ಮತದಾರರ ಪಟ್ಟಿಯ ಪ್ರಕಾರ ಖಾನಾಪುರದ ಕ್ಷೇತ್ರದಲ್ಲಿ ಒಟ್ಟು 56 ಮತದಾರರಿದ್ದಾರೆ. 48 ಮಂದಿ ಅರ್ಹ ಮತದಾರರಾಗಿದ್ದಾರೆ. ರಾಮದುರ್ಗದಲ್ಲಿ ಒಟ್ಟು 35 ಮಂದಿಯಲ್ಲಿ 29 ಮಂದಿ ಅರ್ಹರಾಗಿದ್ದಾರೆ. ನೇಕಾರರ ಕ್ಷೇತ್ರದಲ್ಲಿ 159 ಮತದಾರರ ಪೈಕಿ ಮತ ಚಲಾಯಿಸಲು 77 ಮಂದಿ ಅರ್ಹರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.