ADVERTISEMENT

ಅಮೆರಿಕ ಕಂಪನಿಯಿಂದ ಲ್ಯಾಬ್‌ಗಳು: ಹೈಟೆಕ್‌ ಆಗುತ್ತಿದೆ ಬೆಳಗಾವಿ ಜಿಟಿಸಿಸಿ

ಎಂ.ಮಹೇಶ
Published 4 ಮಾರ್ಚ್ 2021, 19:30 IST
Last Updated 4 ಮಾರ್ಚ್ 2021, 19:30 IST
ಬೆಳಗಾವಿಯ ಜಿಟಿಟಿಸಿಯ ನೋಟ
ಬೆಳಗಾವಿಯ ಜಿಟಿಟಿಸಿಯ ನೋಟ   

ಬೆಳಗಾವಿ: ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಗೆ ಉತ್ಕೃಷ್ಟ ಕೇಂದ್ರದ ಸ್ಥಾನಮಾನ ದೊರೆತಿರುವ ಪರಿಣಾಮ, ಹೈಟೆಕ್ ಆಗುವತ್ತ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಅಗತ್ಯ ಉಪಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಮತ್ತು ಔದ್ಯೋಗಿಕ ಜಗತ್ತಿಗೆ ತಕ್ಕಂತೆ ಸಜ್ಜುಗೊಳಿಸುವ ಉದ್ದೇಶ ಕೇಂದ್ರದ್ದಾಗಿದೆ. ಉತ್ಕೃಷ್ಟ ಕೇಂದ್ರದ ಸ್ಥಾನಮಾನದಿಂದಾಗಿ ತರಬೇತಿ ಪ್ರಕ್ರಿಯೆಯು ಮತ್ತಷ್ಟು ಉನ್ನತ ಮಟ್ಟಕ್ಕೇರಲಿದೆ. ಅಮೆರಿಕದ ಬೋಸ್ಟನ್‌ನ ಪಿಟಿಸಿ (ಪ್ಯಾರಾಮೆಟ್ರಿಕ್‌ ಟೆಕ್ನಾಲಜಿ ಕಾರ್ಪೊರೇಷನ್) ಕಂಪನಿಯು ಹೈಟೆಕ್‌ ತಂತ್ರಜ್ಞಾನ ಕೇಂದ್ರಆರಂಭಿಸಲು ಇದನ್ನು ಆಯ್ಕೆ ಮಾಡಿಕೊಂಡಿದೆ. ಎಕ್ಸಲೆನ್ಸಿ ಕೇಂದ್ರವೆಂದು ಗುರುತಿಸಿ ಅತ್ಯಾಧುನಿಕ ಪ್ರಯೋಗಾಲಯಗಳಿಗೆ ನೆರವಾಗುತ್ತಿದೆ.

ಪ್ರಕ್ರಿಯೆ ನಡೆದಿದೆ

ADVERTISEMENT

‘ಪ್ರಯೋಗಾಲಯಗಳಿಗೆ ಬೇಕಾದ ಪರಿಕರಗಳನ್ನು ಅಳಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಆಟೊಮೇಷನ್ ಕಂಟ್ರೋಲ್ ಲ್ಯಾಬ್, ಐಒಟಿ (ಇಂಟರ್‌ನೆಟ್ ಲ್ಯಾಬ್ ಥಿಂಗ್ಸ್) ಲ್ಯಾಬ್, ಮ್ಯಾನುಫ್ಯಾಕ್ಚರಿಂಗ್ ಅಂಡ್ ಮಷಿನ್ ಲ್ಯಾಬ್, ಪ್ರಾಡಕ್ಟ್‌ ಡಿಸೈನ್ ಅಂಡ್ ಡೆವಲಪ್‌ಮೆಂಟ್ ಲ್ಯಾಬ್, ಆರ್‌ಎಪಿಐಡಿ– ರ‍್ಯಾಪಿಡ್ ಪ್ರೊಟೊಟೈಪಿಂಗ್ ಲ್ಯಾಬ್, ರಿಯಾಲಿಟಿ ಲ್ಯಾಬ್, ರಿವರ್ಸ್‌ ಎಂಜಿನಿಯರಿಂಗ್ ಲ್ಯಾಬ್ ಹಾಗೂ ವ್ಯಾಲಿಡೇಷನ್ ಲ್ಯಾಬ್‌ಗಳು ಸಿದ್ಧಗೊಳ್ಳಲಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ಬಿ.ಜಿ. ಮೊಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಹಾಗೂ ಕಂಪ್ಯೂಟರ್‌ ಸೈನ್ಸ್ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದಾಗಿದೆ. ಬೇರೆ ಕಾಲೇಜುಗಳಲ್ಲಿ ಕಲಿಯುತ್ತಿರುವ ಡಿಪ್ಲೊಮಾ ಹಾಗೂ ಬಿಇ ವಿದ್ಯಾರ್ಥಿಗಳು ಕೂಡ ತರಬೇತಿ ಪಡೆಯಬಹುದು. ಈ ಸಂಬಂಧ ವಿಟಿಯು ಜೊತೆಗೆ ಒಪ್ಪಂದ ಆಗಿದೆ. ಇಂಟರ್ನ್‌ಶಿಪ್‌, ಸರ್ಕಾರಿ ಪ್ರಾಯೋಜಿತ ಯೋಜನೆಗಳಲ್ಲೂ ವಿದ್ಯಾರ್ಥಿಗಳು ಬಂದು ಕಲಿಯಬಹುದು’ ಎಂದು ಹೇಳಿದರು.

ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (ಡಿಟಿಡಿಎಂ) ಮತ್ತು ಡಿಪ್ಲೊಮಾ ಇನ್‌ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ (ಡಿಪಿಎಂ) ಈ ಕೇಂದ್ರದ ಮುಖ್ಯ ಕೋರ್ಸ್‌ಗಳಾಗಿವೆ. 90 ಮಂದಿಗೆ ಮೆರಿಟ್‌ ಆಧರಿಸಿ ಪ್ರವೇಶ ನೀಡಲಾಗುತ್ತಿದೆ. ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ನಂತರ ಪ್ರವೇಶಾತಿ ಆರಂಭವಾಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯವರು ಪ್ರವೇಶ ಪಡೆಯಬಹುದು. ಪ್ರಸ್ತುತ ಮೊದಲನೇ ವರ್ಷದಿಂದ 3ನೇ ವರ್ಷದವರೆಗೆ 15 ಮಂದಿ ಹೆಣ್ಣುಮಕ್ಕಳು ಕೂಡ ಅಭ್ಯಾಸ ಮಾಡುತ್ತಿರುವುದು ವಿಶೇಷವಾಗಿದೆ.

‘ಹೊಸದಾಗಿ ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್‌ ಕೋರ್ಸ್‌ಗೆ ಎನ್‌ಬಿಎ (ನ್ಯಾಷನಲ್ ಬೋರ್ಡ್‌ ಆಫ್ ಅಕ್ರಿಡಿಷನ್)ದಿಂದ ಅನುಮೋದನೆ ಕೇಳಲಾಗುತ್ತಿದೆ. ಆ ಕೋರ್ಸ್‌ ಆರಂಭಿಸಲು ಅಗತ್ಯ ಪರಿಕರಗಳು ನಮ್ಮಲ್ಲಿವೆ’ ಎನ್ನುತ್ತಾರೆ ಅವರು. ಹೆಚ್ಚಿನ ಮಾಹಿತಿಗೆ ಮೊ: 91416 30309 ಸಂಪರ್ಕಿಸಬಹುದು.

***

ಸ್ಮಾರ್ಟ್‌ ಸಿಟಿಯಿಂದ ₹ 8 ಕೋಟಿ

‘ಜಿಟಿಟಿಸಿಯ ಕೋರ್ಸ್‌ಗಳು ಶೇ 100ರಷ್ಟು ಉದ್ಯೋಗದ ಅವಕಾಶ ಒದಗಿಸುತ್ತವೆ. ಇಲ್ಲಿ ಕಲಿತ 60ರಿಂದ 70 ಮಂದಿ ವಿದೇಶಗಳಲ್ಲಿ ಕೆಲಸದಲ್ಲಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಕೆಲವರು ತಮ್ಮದೇ ಕಾರ್ಖಾನೆ ಸ್ಥಾಪಿಸಿ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ’ ಎಂದು ಮೊಗೇರ ಹೇಳಿದರು.

‘ಇಲ್ಲಿ ಕೋರ್ಸ್‌ ಕಲಿತವರು ಎಂಜಿನಿಯರಿಂಗ್‌ (ಬಿಇ) ಕೋರ್ಸ್‌ಗೆ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು. ಎಂಜಿನಿಯರಿಂಗ್‌ ವಿಷಯದ ಕಲಿಕೆಗೆ ಬೇಕಾಗುವಂತಹ ಗುಣಮಟ್ಟದ ಯಂತ್ರೋಪಕರಣಗಳು ಇಲ್ಲಿವೆ’ ಎನ್ನುತ್ತಾರೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರಕ್ಕೆ ₹ 8 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣ ಒದಗಿಸಲಾಗಿದೆ. 3ಡಿ ಪ್ರಿಂಟರ್ (ಮೆಟಲ್‌ ಅಂಡ್ ಪ್ಲಾಸ್ಟಿಕ್ಸ್) ಲ್ಯಾಬ್, ರೋಬೋಟಿಕ್ಸ್ ಲ್ಯಾಬ್, ಪವರ್ ಎಲೆಕ್ಟ್ರಾನಿಕ್ಸ್‌ ಲ್ಯಾಬ್‌, ಸ್ಯಾಪ್ (ಸಿಸ್ಟಂ ಅಪ್ಲಿಕೇಷನ್ ಪ್ರೋಗ್ರಾಂ) ತಂತ್ರಾಂಶ, ಸಿಎನ್‌ಸಿ ಟರ್ನಿಂಗ್ ಅಂಡ್ ಸಿಎನ್‌ಸಿ ಮಿಲ್ಲಿಂಗ್ ಮಷಿನ್‌ಗಳನ್ನು ಪೂರೈಸಲಾಗಿದೆ. ಇದರೊಂದಿಗೆ, 80 ಕಂಪ್ಯೂಟರ್‌ಗಳು, ತಲಾ ಸ್ಮಾರ್ಟ್‌ ಬೋರ್ಡ್‌ ಮತ್ತು ಪ್ರೊಜೆಕ್ಟರ್‌ಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆಂದು ಅವುಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಇದರಿಂದ ಬಹಳ ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.