
ಬೆಳಗಾವಿ: ಯುವ ಉದ್ಯಮಿ, ಎಂಜಿನಿಯರ್ ಆಗಿರುವ 46 ವರ್ಷದ ಅಮಿತ ಕೋರೆ ಅವರ ಕೈಗೆ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ನೀಡಲಾಗಿದೆ. ಪ್ರಭಾಕರ ಕೋರೆ ಅವರೂ ಕೇವಲ 38 ವರ್ಷದವರಿದ್ದಾಗಲೇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದರು. ಅವರ ಪುತ್ರ ಸಹ ತಂದೆಯ ಮಾರ್ಗದಲ್ಲಿ ಹೆಜ್ಜೆ ಇಟ್ಟಿದ್ದಾರೆ.
42 ವರ್ಷಗಳ ಕಾಲ ನಿರಂತರ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದ ಪ್ರಭಾಕರ ಕೋರೆ ಅವರು, ಈಗ ಗೌರವ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಂಸ್ಥೆಯನ್ನು ವಿಶ್ವವ್ಯಾಪಿಯಾಗಿ ಬೆಳೆಸುವಲ್ಲಿ ಅವರು ಮಾಡಿದ ಕೆಲಸಗಳು ಹಾಗೂ ಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶದಿಂದ, ಗೌರವ ಕಾರ್ಯಾಧ್ಯಕ್ಷ ಹುದ್ದೆ ಸೃಜಿಸಲಾಗಿದೆ.
ಬಿಇ, ಎಂಬಿಎ ಪದವೀಧರ ಆಗಿರುವ ಅಮಿತ ಅವರು ಉದ್ಯಮ ಹಾಗೂ ಸಹಕಾರ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ, ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ 2010ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ, ಸಹಕಾರ ಹಾಗೂ ಕೈಗಾರಿಕಾ ವಲಯದಲ್ಲಿ ಅನುಭವ ಹೊಂದಿದ್ದಾರೆ. ಹೀಗಾಗಿ, ಸಂಸ್ಥೆ ಮುನ್ನಡೆಸಲು ಅವರನ್ನು ಎಲ್ಲರೂ ಸೇರಿ ಆಯ್ಕೆ ಮಾಡಿದ್ದಾಗಿ ಸಂಸ್ಥೆಯ ಮೂಲಗಳು ತಿಳಿಸಿವೆ.
ಸಪ್ತರ್ಷಿಗಳಿಂದ 1916ರಲ್ಲಿ ಸ್ಥಾಪನೆಗೊಂಡ ಕೆಎಲ್‌ಇ ಸಂಸ್ಥೆ ದೇಶದ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಶಾಲೆಗಳು, ಕಾಲೇಜುಗಳು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ 317ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ. ವಿಶ್ವವ್ಯಾಪಿಯಾಗಿ ಇದರ ಹೆಸರು ಬೆಳೆದಿದೆ.
ನಾಲ್ಕು ದಶಕಗಳಲ್ಲಿ ಪ್ರಭಾಕರ ಕೋರೆ ಅವರು 50 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು. ಉತ್ತರ ಕರ್ನಾಟಕದ ಮಕ್ಕಳ ಶಿಕ್ಷಣಕ್ಕಾಗಿ ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆಯ ಶತಮಾನೋತ್ಸವ ದಾಟಿದೆ. 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, ಬೃಹತ್ ಆಸ್ಪತ್ರೆಗಳನ್ನು ಹೊಂದಿದ ಸಂಸ್ಥೆಯ ಬಜೆಟ್ ₹3 ಸಾವಿರ ಕೋಟಿ ದಾಟಿದೆ.
ಇತರ ಪದಾಧಿಕಾರಿಗಳು...
ಮಹಾಂತೇಶ ಶಿವಾನಂದ ಕೌಜಲಗಿ (ಅಧ್ಯಕ್ಷ) ತಟವಟಿ ಬಸವರಾಜ ಶಿವಲಿಂಗಪ್ಪ (ಉಪಾಧ್ಯಕ್ಷ) ಬಾಗೇವಾಡಿ ಪ್ರವೀಣ ಅಶೋಕ ಡಾ.ದೊಡವಾಡ ಪ್ರೀತಿ ಕರಣ್ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೊಳ್ಳಿ ಮಲ್ಲಿಕಾರ್ಜುನ ಚನಬಸಪ್ಪ ಮೆಟಗುಡ್ ವಿಜಯ ಶ್ರೀಶೈಲಪ್ಪ ಮುನವಳ್ಳಿ ಮಂಜುನಾಥ ಶಂಕರಪ್ಪ ಪಾಟೀಲ ಬಸವರಾಜ ರುದ್ರಗೌಡ ಡಾ.ಪಾಟೀಲ ವಿಶ್ವನಾಥ ಈರನಗೌಡ ಪಾಟೀಲ ಯಲ್ಲನಗೌಡ ಶಿವಮೊಗ್ಗೆಪ್ಪ ಪಟ್ಟೇದ ಅನಿಲ ವಿಜಯಬಸಪ್ಪ (ಆಡಳಿತ ಮಂಡಳಿಯ ಸದಸ್ಯರು). ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಜಂಟಿ ಕಾರ್ಯದರ್ಶಿ ಡಾ.ಎಸ್.ಎಸ್.ಜಲಾಲಪುರೆ ಡಾ.ಪಿ.ಆರ್.ಕಡಕೋಳ ಹಾಗೂ ಅಧಿಕಾರಿ ವರ್ಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.