ಅಥಣಿ: ಆಧ್ಯಾತ್ಮಿಕ ಪಂಥವೊಂದರ ಮಾರುಹೋಗಿ ಸೆಪ್ಟೆಂಬರ್ 8ರಂದು ದೇಹತ್ಯಾಗಕ್ಕೆ ಸಿದ್ಧವಾಗಿದ್ದ ತಾಲ್ಲೂಕಿನ ಅನಂತಪುರ ಗ್ರಾಮದ ತುಕಾರಾಮ ಇರಕರ ಕುಟುಂಬದ ನಾಲ್ವರು ಸದಸ್ಯರು ಮತ್ತು ಅನ್ಯರಾಜ್ಯಗಳ ಐವರ ಮನವೊಲಿಸುವಲ್ಲಿ ಕವಲಗುಡ್ಡದ ಅಮರೇಶ್ವರ ಮಹಾರಾಜರು ಮತ್ತು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಯಶಸ್ವಿಯಾಗಿದ್ದಾರೆ.
ಸಂತ ಹರಿಯಾಣದ ಬಾಬಾ ರಾಮಪಾಲ್ ಅವರ ಪ್ರವಚನದಿಂದ ಪ್ರೇರಣೆಗೊಂಡಿದ್ದ ತುಕಾರಾಮ ಇರಕರ, ಅವರ ಪತ್ನಿ ಸಾವಿತ್ರಿ, ಪುತ್ರ ರಮೇಶ, ಸೊಸೆ ವೈಷ್ಣವಿ ಮತ್ತು ಬೇರೆ ರಾಜ್ಯಗಳ ಐವರು, ದೇಹತ್ಯಾಗಕ್ಕೆ ನಿರ್ಧರಿಸಿದ್ದರು. ‘ನಾವು ಇಲ್ಲಿ ಇರಲ್ಲ. ಬಾಬಾ ನಮ್ಮನ್ನು ಕೈಲಾಸಕ್ಕೆ ಕರೆದೊಯ್ಯವರು. ನಮಗೆ ಮೋಕ್ಷ ಕೊಡಿಸುವರು’ ಎಂದು ಘೋಷಿಸಿದ್ದರು.
ಈ ಸುದ್ದಿ ಜಿಲ್ಲೆಯಾದ್ಯಂತ ಹಬ್ಬಿದ ಹಿನ್ನೆಲೆಯಲ್ಲಿ ಅಮರೇಶ್ವರ ಮಹಾರಾಜರು ಮತ್ತು ಸುಭಾಷ ಸಂಪಗಾವಿ ಅವರು, ಶನಿವಾರ ಅನಂತಪುರಕ್ಕೆ ಹೋಗಿ ಆಪ್ತ ಸಮಾಲೋಚನೆ ನಡೆಸಿದರು.
‘ಬಾಬಾ ರಾಮಪಾಲ್ ಮಹಾರಾಷ್ಟ್ರದಲ್ಲಿ ಪೊಲೀಸರ ವಶದಲ್ಲಿದ್ದಾರೆ. ಯಾವುದೇ ಮೌಢ್ಯಕ್ಕೆ ಬಲಿಯಾಗದೆ, ಉತ್ತಮ ಜೀವನ ಸಾಗಿಸಿ’ ಎಂದು ತಿಳಿವಳಿಕೆ ಹೇಳಿದರು. ದೇಹತ್ಯಾಗಕ್ಕೆ ಮುಂದಾದವರು, ತಮ್ಮ ನಿರ್ಧಾರ ಬದಲಿಸಿದರು.
ತಹಶೀಲ್ದಾರ್ ಸಿದ್ದರಾಜ ಬೋಸಗಿ , ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ, ತಾಲ್ಲೂಕು ಆರೋಗ್ಯಾಧಿಕಾರಿ ಬಸನಗೌಡ ಕಾಗೆ, ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.