ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರವು ರಾಜ್ಯವನ್ನು ಶ್ಲಾಘಿಸಿದೆ. ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿರುವ ರಾಜ್ಯ ಸರ್ಕಾರದ ಮಾದರಿಯನ್ನು ಕೇಂದ್ರ ಸರ್ಕಾರವೂ ಅನುಸರಿಸುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಅಧಿಕಾರವಧಿಯಲ್ಲಿ ಅಂಗನವಾಡಿ ಕೇಂದ್ರಗಳು ಆರಂಭವಾಗಿದ್ದವು. ನವೆಂಬರ್ 19ರಂದು ಇಂದಿರಾ ಗಾಂಧಿ ಜನ್ಮದಿನವಿದೆ. ಹಾಗಾಗಿ ಬೆಂಗಳೂರಿನಲ್ಲಿ ಅಂದೇ ಅಂಗನವಾಡಿ ಕೇಂದ್ರಗಳ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂದರು.
‘ಸಂಕಷ್ಟದಲ್ಲಿ ಇರುವಂಥ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗುವ ದೃಷ್ಟಿಯಿಂದ ‘ಅಕ್ಕಾ ಪಡೆ’ಗಳನ್ನು ಸ್ಥಾಪಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನ.19ರಂದೇ ‘ಅಕ್ಕಾ’ ಪಡೆಗೆ ಚಾಲನೆ ನೀಡಲಿದ್ದೇವೆ. ಪ್ರಾಯೋಗಿಕವಾಗಿ ಮೈಸೂರು, ಉಡುಪಿ ಮತ್ತು ಬೆಳಗಾವಿಯಲ್ಲಿ ಇವು ಜಾರಿಗೆ ಬರಲಿವೆ. ಇವು 10ರಿಂದ 15 ಜನರ ತಂಡವಾಗಿದ್ದು, ಹಿರಿಯ ಎನ್‌ಸಿಸಿ ಕೆಡೆಟ್‌ಗಳು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಒಳಗೊಂಡಿವೆ’ ಎಂದರು.
‘ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರವಿದ್ದರೂ, ರಾಜ್ಯದಲ್ಲಿ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ತಂದಿದ್ದೇನೆ. ವಿಶೇಷವಾಗಿ ಪ್ರಯತ್ನಿಸಿ ಸಕ್ಷಮ್ ಯೋಜನೆಯಡಿ ರಾಜ್ಯಕ್ಕೆ 17,500 ಅಂಗನವಾಡಿ ಕೇಂದ್ರಗಳನ್ನು ತರಲಾಗಿದೆ’ ಎಂದರು.
‘ರಾಜ್ಯದಲ್ಲಿ ನಾವು 2,500 ಬಾಲ್ಯವಿವಾಹ ಪ್ರಕರಣ ದಾಖಲಿಸಿದ್ದೇವೆ. ಸಾಮಾಜಿಕ ಜಾಲತಾಣ ಬಳಕೆ, ಪ್ರೇಮ ಪ್ರಕರಣ, ಕೌಟುಂಬಿಕ ಸಮಸ್ಯೆ ಮತ್ತಿತರ ಕಾರಣಗಳಿಂದ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕಾನೂನು ಜಾರಿಗೆ ತರುತ್ತಿದೆ. ಬಾಲ್ಯವಿವಾಹ ಅಥವಾ ಅವರ ನಿಶ್ಚಿತಾರ್ಥಗಳಲ್ಲಿ ಭಾಗವಹಿಸುವವರನ್ನು ಒಳಗೊಂಡಂತೆ ಯಾರನ್ನೂ ಬಿಡಲಾಗುವುದಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ಪ್ರಕರಣದ ಬಗ್ಗೆ ಗಮನ ಹರಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.