ಬೆಳಗಾವಿ: ‘ಬಸವಣ್ಣನವರ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳನ್ನು ತಿರಸ್ಕರಿಸುವ ಮನಸ್ಥಿತಿಯ ವ್ಯಕ್ತಿ ಸಮಾಜದಲ್ಲಿ ಯಾರನ್ನೂ ಪ್ರೀತಿಸಲಾರ. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರ ತತ್ವ, ಆದರ್ಶ ಹಾಗೂ ಬದುಕು ವಿಶ್ವಕ್ಕೆ ಮಾದರಿ’ ಎಂದು ಎಂದು ಸಾಹಿತಿ ಪ್ರೊ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಈಚೆಗೆ ಆಯೋಜಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ‘ಬಸವ ಸಂಸ್ಕೃತಿ ಅಭಿಯಾನ– ಒಂದು ವಿಶ್ಲೇಷಣೆ’ ಕುರಿತು ಉಪನ್ಯಾಸ ನೀಡಿದರು.
‘ಸದ್ಯ ಪ್ರತಿ ಜಿಲ್ಲೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದವರು ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಅಭೂತಪೂರ್ವ ಯಶಸ್ಸು ದಾಖಲಿಸಿದೆ. ವಿದ್ಯಾರ್ಥಿಗಳೊಂದಿಗಿನ ವಚನ ಸಂವಾದ ಸಮಾಜ–ಧಾರ್ಮಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ‘ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದನ್ನು ಮಹಾಸಭಾ ಉಗ್ರವಾಗಿ ಖಂಡಿಸುತ್ತದೆ. ಸಮೀಕ್ಷೆಯಲ್ಲಿ ಎಲ್ಲ ಲಿಂಗಾಯತ ಒಳ ಪಂಗಡದವರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ಬರೆಸಬೇಕು’ ಎಂದರು.
ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಸಾದ ದಾಹೋಹಿಗಳಾದ ಎಸ್.ಜಿ.ಸಿದ್ನಾಳ, ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಸದಸ್ಯೆ ಶೈಲಜಾ ಭಿಂಗೆ ಇದ್ದರು.
ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಪ್ರವೀಣ ಚಿಕಲಿ, ಚಂದ್ರು ಬೂದಿಹಾಳ, ಮುರಿಗೆಪ್ಪ ಬಾಳಿ, ರತ್ನಾ ಬೆಣಚಮರ್ಡಿ, ಸುಜಾತಾ ಮತ್ತಿಕಟ್ಟಿ, ಅನಿತಾ ಚಟ್ಟರ, ನಯನಾ ಗಿರಿಗೌಡರ, ಕಾವೇರಿ ಕಿಲಾರಿ ಅವರನ್ನು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.