
ರಾಮದುರ್ಗ: ‘ನಾನು ದಲಿತರ ವಿರೋಧಿ ಅಲ್ಲ. ನಾನು ಕೂಡ ದಲಿತ ನಾಯಕರೊಬ್ಬರ ಮನೆಗಳಲ್ಲಿಯೇ ಓದಿ, ಬೆಳೆದವನು. ಕೆಟ್ಟ ವೇಳೆ, ರೈತರ ಪ್ರತಿಭಟನೆಯಲ್ಲಿ ಸಿಲುಕಿಕೊಂಡು ಸಭೆಗೆ ಹಾಜರಾಗಲಿಲ್ಲ’ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಸ್ಪಷ್ಟ ಪಡಿಸಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಬುಧವಾರ ಜರುಗಿದ ದಲಿತರ ಹಕ್ಕು ಸಂರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಭೆಯಲ್ಲಿ ದಲಿತರ ಬಹಿಷ್ಕಾರದ ಕುರಿತು ಸ್ಪಷ್ಟನೆ ನೀಡಿ, ‘ನನ್ನ ಗೈರು ಎತ್ತಿ ಹಿಡಿದು ದಲಿತರೂ ಬಹಿಷ್ಕಾರ ಹಾಕಿರುವುದು ಸಹಜವಾಗಿದೆ. ಎಂದಿಗೂ ದಲಿತರನ್ನು ನಾನು ಕಡೆಗಣಿಸುವುದಿಲ್ಲ’ ಎಂದರು.
‘ಕಳೆದ ಸಭೆಯಲ್ಲಿ ಶಾಸಕರು ಜಾತಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ನಾನೆಂದೂ ಜಾತೀಯತೆ ಮಾಡಿಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಬಂದು ಹೋಗುತ್ತಾರೆ. ಯಾರಿಗೂ ಸೀಮೆ ಹಾಕಿ ಪ್ರತ್ಯೇಕತೆ ಮಾಡಿಲ್ಲ’ ಎಂದು ತಿಳಿಸಿದರು.
‘ಕಳೆದ ಸಭೆಯು ಎರಡೂವರೆ ಗಂಟೆ ತಡವಾದರೂ ತಹಶೀಲ್ದಾರರು ಹಾಜರಾಗಿಲ್ಲ. ಸರ್ಕಾರದ ಪ್ರತಿನಿಧಿ ಮತ್ತು ದಲಿತರ ಕಷ್ಟಗಳಿಗೆ ಸ್ಪಂದಿಸಬೇಕಾದ ಶಾಸಕರು ಸಭೆಯಲ್ಲಿ ಬಾರದಿದ್ದುದಕ್ಕೆ ಸಭೆ ಬಹಿಷ್ಕರಿಸಲಾಯಿತು’ ಎಂದು ದಲಿತ ಮುಖಂಡ ಬಿ.ಆರ್. ದೊಡಮನಿ ಸಮಜಾಯಿಷಿ ನೀಡಿದರು.
ಡಿವೈಎಸ್‌ಪಿ ಚಿದಂಬರ ಮಡಿವಾಳರ, ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹನಮಂತ ವಕ್ಕುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.