ADVERTISEMENT

ಅಥಣಿ: ಹೆಸ್ಕಾಂಗೆ ₹ 25ಕೋಟಿ ನಷ್ಟ

ಪರಿವರ್ತಕಗಳಿಗಾಗಿ 20 ದಿನಗಳಿಂದಲೂ ಕಾಯುತ್ತಿರುವ ರೈತರು!

ಪರಶುರಾಮ ನಂದೇಶ್ವರ
Published 20 ಸೆಪ್ಟೆಂಬರ್ 2019, 5:16 IST
Last Updated 20 ಸೆಪ್ಟೆಂಬರ್ 2019, 5:16 IST
ಅಥಣಿ ಹೆಸ್ಕಾಂ ಕಚೇರಿ ಆವರಣದಲ್ಲಿ ಇಟ್ಟಿರುವ ವಿದ್ಯುತ್‌ ಪರಿವರ್ತಕಗಳನ್ನು ಎಇಇ ಶೇಖರ ಬಹರೂಪಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು
ಅಥಣಿ ಹೆಸ್ಕಾಂ ಕಚೇರಿ ಆವರಣದಲ್ಲಿ ಇಟ್ಟಿರುವ ವಿದ್ಯುತ್‌ ಪರಿವರ್ತಕಗಳನ್ನು ಎಇಇ ಶೇಖರ ಬಹರೂಪಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು   

ಅಥಣಿ: ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲ್ಲೂಕಿನಲ್ಲಿ ಹೆಸ್ಕಾಂಗೆ ₹ 25 ಕೋಟಿ ನಷ್ಟ ಸಂಭವಿಸಿದೆ.

ಪ್ರವಾಹದಿಂದಾಗಿ ತಾಲ್ಲೂಕಿನ 24 ಹಳ್ಳಿಗಳು ತತ್ತರಿಸಿ ಹೋಗಿವೆ. ಅದರೊಂದಿಗೆ ರೈತರ ಹೊಲ, ಗದ್ದೆಗಳಲ್ಲಿನ ವಿದ್ಯುತ್‌ ಪರಿವರ್ತಕಗಳು ಕೆಟ್ಟು ಹೋಗಿವೆ. ಹೀಗಾಗಿ, ಪರಿವರ್ತಕಗಳಿಗಾಗಿ ರೈತರು ಇಲ್ಲಿನ ಹೆಸ್ಕಾಂ ಕಚೇರಿಗೆ 20 ದಿನಗಳಿಂದಲೂ ಅಲೆಯುತ್ತಿದ್ದಾರೆ. ಕೆಲವು ಪರಿವರ್ತಕಗಳನ್ನು ದುರಸ್ತಿಪಡಿಸಬೇಕಾಗಿದೆ. ಹಲವನ್ನು ಹೊಸದಾಗಿಯೇ ಅಳವಡಿಸಬೇಕಾದ ಸ್ಥಿತಿ ಇದೆ.

‘ತಾಲ್ಲೂಕಿನಲ್ಲಿ 2,163 ವಿದ್ಯುತ್ ಕಂಬಗಳು ಬಿದ್ದಿದ್ದವು. ನೆರೆ ನಿಂತ ನಂತರ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗಿದೆ. 638 ಕಂಬಗಳನ್ನು ಸರಿಪಡಿಸುವುದು ಬಾಕಿ ಇದೆ. 1,524 ವಿದ್ಯುತ್ ಪರಿವರ್ತಕಗಳಿಗೆ ಪ್ರವಾಹದಿಂದ ಸಂಪೂರ್ಣ ಧಕ್ಕೆಯಾಗಿದೆ. ಇವುಗಳಲ್ಲಿ 9,37 ಪರಿವರ್ತಕಗಳನ್ನು ಬದಲಾಯಿಸಲಾಗಿದೆ. ಉಳಿದವುಗಳನ್ನೂ ಸರಿಪಡಿಸಿಕೊಡಲಾಗುವುದು. ರೈತರಿಗೆ ಸ್ಪಂದಿಸುವುದಕ್ಕೆ ನಾವೂ ಬಹಳ ಶ್ರಮ ವಹಿಸುತ್ತಿದ್ದೇವೆ’ ಎಂದು ಹೆಸ್ಕಾಂ ಎಇಇ ಶೇಖರ್ ಬಹರೂಪಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರೈತರ ಪರಿವರ್ತಕಗಳು ಹಾಳಾದರೆ, ಸರ್ಕಾರದ ಆದೇಶದ ಪ್ರಕಾರ 72ಗಂಟೆಗಳಲ್ಲಿ ಬದಲಾಯಿಸಕೊಂಡಬೇಕು. ಆದರೆ ಇಲ್ಲಿ ಆ ರೀತಿಯಾಗುತ್ತಿಲ್ಲ. ಹಾಳಾದ ಪರಿವರ್ತಕಗಳನ್ನು 20 ದಿನಗಳ ಹಿಂದೆಯೇ ಹೆಸ್ಕಾಂ ಕಚೇರಿಗೆ ತಂದಿಟ್ಟಿದ್ದಾರೆ. ಆದರೆ, ಅವರಿಗೆ ಬೇರೆ ಪರಿವರ್ತಕ ಒದಗಿಸುವುದಾಗಲೀ, ದುರಸ್ತಿಪಡಿಸಿಕೊಡುವ ಕೆಲಸವಾಗಲಿ ನಡೆದಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಕಷ್ಟು ಪರಿವರ್ತಕಗಳು ಇದ್ದರೂ, ರೈತರಿಗೆ ಕೊಡುತ್ತಿಲ್ಲ ಎಂದು ದೂರಲಾಗುತ್ತಿದೆ.

ರಿಪೇರಿ ಮಾಡಿಕೊಟ್ಟರೆ 2–3 ದಿನಗಳಲ್ಲಿ ಕೊಡಬಹುದಾಗಿದೆ. ಆದರೆ, ಇದಕ್ಕೆ ಆದ್ಯತೆ ನೀಡುತ್ತಿಲ್ಲ. ‘ನಾವು ಇಲ್ಲಿ ದುರಸ್ತಿ ಮಾಡುವುದಿಲ್ಲ. ಹಾವೇರಿಗೆ ಕಳುಹಿಸಿ ದುರಸ್ತಿಪಡಿಸಿ ತರಿಸಬೇಕಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

‘20 ದಿನಗಳ ಹಿಂದೆ ಪರಿವರ್ತಕ ತಂದು ಹೆಸ್ಕಾಂಗೆ ಒಪ್ಪಿಸಿದ್ದೇನೆ. ಆದರೆ, ಈವರೆಗೂ ನೀಡಿಲ್ಲ. ಇಲ್ಲಿಗೆ ಬರುವುದು ಬರಿಗೈಲಿ ಹೋಗುವುದೇ ನಡೆಯುತ್ತಿದೆ. ನಮ್ಮ ಕುಟುಂಬದವರು ಹೊಲದಲ್ಲಿ ಇರುತ್ತೇವೆ. ವಿದ್ಯುತ್‌ ಪರಿವರ್ತಕವಿಲ್ಲದೇ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳುವುದಕ್ಕೂ ಆಗುತ್ತಿಲ್ಲ. ರಾತ್ರಿ ವೇಳೆ ಮೇಣದಬತ್ತಿಯೇ ಗತಿಯಾಗಿದೆ. ಬಹಳ ಮಂದಿಗೆ ಇದೇ ರೀತಿಯಾಗಿದೆ’ ಎಂದು ಝುಂಜುರವಾಡ ಗ್ರಾಮದ ರೈತ ಅಶ್ವಥ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.