ADVERTISEMENT

ಕಾಂಗ್ರೆಸ್ ಸಭೆಯಲ್ಲಿ ಗದ್ದಲ, ಗೊಂದಲ

ಶಾಸಕರಾದ ಎಂ.ಬಿ. ಪಾಟೀಲ, ಸತೀಶ ಎದುರು ಭಿನ್ನಮತ ಸ್ಫೋಟ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 15:07 IST
Last Updated 25 ಸೆಪ್ಟೆಂಬರ್ 2019, 15:07 IST
ಅಥಣಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಬುಧವಾರ ನಡೆಸಿದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕ ಎಂ.ಬಿ. ಪಾಟೀಲ ಮಾತನಾಡಿದರು
ಅಥಣಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಬುಧವಾರ ನಡೆಸಿದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕ ಎಂ.ಬಿ. ಪಾಟೀಲ ಮಾತನಾಡಿದರು   

ಅಥಣಿ: ಅಥಣಿ ಮತ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡರು ಬುಧವಾರ ನಡೆಸಿದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ, ಕಾರ್ಯಕರ್ತರಲ್ಲಿನ ಭಿನ್ನಮತ ಸ್ಫೋಟಗೊಂಡಿತು. ಗದ್ದಲದಿಂದಾಗಿ ಸಭೆಯು ಗೊಂದಲದ ಗೂಡಾಯಿತು.

ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ವೇಳೆ, ಕೆಲವರು ತಮಗೆ ಬೇಕಾದ ಅಭ್ಯರ್ಥಿ ಕುರಿತು ಘೋಷಣೆ ಕೂಗುತ್ತಿದ್ದರು. ಇದರಿಂದ ಮುಖಂಡರು ಮುಜುಗರ ಅನುಭವಿಸಬೇಕಾಯಿತು.

‘ನೀವು ಹೀಗೆ ಮಾಡಿದರೆ ಎದ್ದು ಹೋಗುತ್ತೇನೆ. ಯಾರ ಪರವಾಗಿ ಘೋಷಣೆ‌‌ ಕೂಗುತ್ತೀರೋ ಅವರನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಸುವುದೇ ಇಲ್ಲ’ ಎಂದು ಶಾಸಕ ಎಂ.ಬಿ. ಪಾಟೀಲ ಅವರು ತಿಳಿಸಿದರು.

ADVERTISEMENT

‘ತಮ್ಮ ಪರ ಅಭಿಪ್ರಾಯ ಮಂಡಿಸಲೆಂದೇ ಕೆಲವರು ಜನರನ್ನು ಕರೆತಂದಿದ್ದಾರೆ’ ಎಂಬ ದೂರು ಕೂಡ ಕೇಳಿಬಂತು.

ನಂತರ 16 ಮಂದಿ ಆಕಾಂಕ್ಷಿಗಳೊಂದಿಗೂ ಮುಖಂಡರು ಪ್ರತ್ಯೇಕವಾಗಿ ಸಂದರ್ಶನ ನಡೆಸಿದರು.

‘ಒಬ್ಬರಿಗಷ್ಟೇ ಪಕ್ಷದ ಟಿಕೆಟ್‌ ಸಿಗುತ್ತದೆ. ಕಾರ್ಯಕರ್ತರ ಅಭಿಪ್ರಾಯ ಆದರಿಸಿ, ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗುವುದು. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷ ವಿರೋಧಿ ಚುಟುವಟಿಕೆ ನಡೆಸಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಪಾಟೀಲ ಎಚ್ಚರಿಕೆ ನೀಡಿದರು.

‘ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಆಣೆ ಮಾಡಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದರು. ಆಕಾಂಕ್ಷಿಗಳನ್ನು ವೇದಿಕೆಗೆ ಕರೆದ ಪಾಟೀಲರು, ಪ್ರಮಾಣ ಮಾಡಿಸಿದರು.

ಸಮರ್ಥರಿಗೆ ಟಿಕೆಟ್‌ ನೀಡಬೇಕಿತ್ತು:

‘ಆಪರೇಷನ್‌ ಕಮಲ ಪ್ರಜಾಪ್ರಭುತ್ವಕ್ಕೆ ಕಳಂಕ. ಇದರ ವಿರುದ್ಧ ಹೋರಾಡಬೇಕು. ಕಾರ್ಯಕರ್ತರಲ್ಲಿ ಕ್ಷಮೆ ಕೇಳುತ್ತೇನೆ. ಏಕೆಂದರೆ, ಈ ಉಪ ಚುನಾವಣೆ ಬರಲು ನಾವೇ ಕಾರಣ. ಇಲ್ಲಿ ಹೋದ ಚುನಾವಣೆಯಲ್ಲಿ ಸಮರ್ಥ ವ್ಯಕ್ತಿಗೆ ಟಿಕೆಟ್‌ ಕೊಡಬೇಕಿತ್ತು. ಆಗ ಉಪಚುನಾವಣೆ ಪ್ರಮೇಯವೇ ಬರುತ್ತಿರಲಿಲ್ಲ’ ಎಂದರು.

‘ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದೇವೆ. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಜನರು ಕ್ಷಮಿಸುವುದಿಲ್ಲ’ ಎಂದು ಹೇಳಿದರು.

‘ಇಲ್ಲಿನ ಅನರ್ಹ ಶಾಸಕ ಮಹೇಶ ಕುಮಠಳ್ಳಿ ₹ 50 ಕೋಟಿಗೆ ಮಾರಾಟವಾಗಿದ್ದಾರೆ. ಶಾಸಕರೆಂದರೆ ಮಾರಾಟದ ವಸ್ತು ಎನ್ನುವ ವಾತಾವರಣವನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಯವರು ಮಾಡಿದ್ದಾರೆ. ಅವರಿಗೆ ಪಾಠ ಕಲಿಸಬೇಕು. ಮತದಾರ ಪ್ರಭುವಿಗೆ ಮೋಸ ಮಾಡಿದ ಪಕ್ಷಾಂತರಿಗಳಿಗೆ ಜನರ ಶಾಪ ತಟ್ಟದೇ ಬಿಡುವುದಿಲ್ಲ’ ಎಂದರು.

ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕಾರ್ಯಕರ್ತರೇ ನಮ್ಮ ಆಸ್ತಿ. ಅವರ ಪ್ರತಿ ಅಭಿಪ್ರಾಯಕ್ಕೂ ಮನ್ನಣೆ ನೀಡುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಮುಖಂಡರಾದ ವೀರಕುಮಾರ ಪಾಟೀಲ, ಶಾಮ್‌ ಘಾಟಗೆ, ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ, ಅನಿಲ ಸುಣದೋಳಿ, ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಸಂಜೀವ ಕಾಂಬಳೆ, ಟಿಕೆಟ್‌ ಆಕಾಂಕ್ಷಿಗಳಾದ ಬಸವರಾಜ ಬುಟಾಳೆ, ಧರೆಪ್ಪ ಠಕ್ಕನ್ನವರ, ಗಜಾನನ ಮಂಗಸೂಳಿ, ಸುನಿಲ ಸಂಕ, ಎಸ್.ಕೆ. ಬುಟಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.