ADVERTISEMENT

ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ 6 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 19:45 IST
Last Updated 1 ಡಿಸೆಂಬರ್ 2019, 19:45 IST
ಬೆಳಗಾವಿಯಲ್ಲಿ 6 ಮಂದಿ ಕೊಲೆ ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ
ಬೆಳಗಾವಿಯಲ್ಲಿ 6 ಮಂದಿ ಕೊಲೆ ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ   

ಬೆಳಗಾವಿ: ನಗರದಲ್ಲಿ ನ. 1ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ವ್ಯಕ್ತಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿದ್ದ 6 ಮಂದಿ ಆರೋಪಿಗಳನ್ನು ಖಡೇಬಜಾರ್‌ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕಸಾಯಿಗಲ್ಲಿಯ ಇಮಾಮಸಾಬ ಅಲಿಯಾಸ್ ಶಹಬಾಜ ಇಮ್ತಿಯಾಜ ಮಾರಿಹಾಳ (22), ಶೈಫ್ ಆಲಿ ಜಾಫರ ಬೇಪಾರಿ (19), ಆದಿಲ್ ಮುಸ್ತಾಕ ಬೇಪಾರಿ (21), ಅಮೀನ ಯೂನೂಸ್ ಚೌದರಿ (21), ಅಜಾನ್ ಯೂನೂಸ್ ಚೌದರಿ (20) ಹಾಗೂ ಆಟೊನಗರ 2ನೇ ಕ್ರಾಸ್‌ನ ಶಾರೂಖಾನ ಬಶೀರ ಪಠಾಣ (22) ಬಂಧಿತರು.

‘ಇವರು ರಾಜ್ಯೋತ್ಸವ ಮೆರವಣಿಗೆ ನೋಡಲು ಬಂದಿದ್ದ ಆಕಾಶ ಸಂಜಯ ಎನ್ನುವವರೊಂದಿಗೆ ಶನಿವಾರಖೂಟ್‌ ಬಳಿ ಜಗಳ ತೆಗೆದು ಅವರ ಅಣ್ಣ ನಿರಂಜನ ಸಂಜಯ ಪಿಸೆ ಎನ್ನುವವರ ಕುತ್ತಿಗೆ ಹರಿತವಾದ ಆಯುಧದಿಂದ ಒಡೆದು ಕೊಲ್ಲಲು ಯತ್ನಿಸಿ ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳು ಹಾಗೂ ಇತರ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಇನ್‌ಸ್ಪೆಕ್ಟರ್‌ ಧೀರಜ್‌ ಶಿಂಧೆ, ಎಎಸ್‌ಐ ಎಸ್‌.ಎಂ. ಗಣಾಚಾರಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.‌‌

106 ಲೀಟರ್‌ ಅಕ್ರಮ ಮದ್ಯ ವಶ

ಗ್ರಾಮೀಣ ಠಾಣೆ ವ್ಯಾಪ್ತಿಯ ಬಾದರವಾಡಿ ಗ್ರಾಮದ ಮನೆಯಲ್ಲಿ ಗೋವಾ ರಾಜ್ಯದ ವಿವಿಧ ಕಂಪನಿಯ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಐಬಿ ಪೊಲೀಸರು ಬಂಧಿಸಿ, ಅವರಿಂದ ₹ 28ಸಾವಿರ ಮೌಲ್ಯದ 106 ಲೀಟರ್‌ ಮದ್ಯ ಮತ್ತು ₹ 2,650 ನಗದು ವಶಕ್ಕೆ ಪಡೆದಿದ್ದಾರೆ.

ಅದೇ ಗ್ರಾಮದ ನಿವಾಸಿ ಲಕ್ಷ್ಮಣ ಸಾತೇರಿ ಪಾಟೀಲ (50) ಬಂಧಿತ. ಇನ್‌ಸ್ಪೆಕ್ಟರ್‌ ಸಂಜೀವ ಕಾಂಬಳೆ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.