ADVERTISEMENT

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು:ವಿಎಚ್‌ಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 17:09 IST
Last Updated 30 ಸೆಪ್ಟೆಂಬರ್ 2020, 17:09 IST

ಬೆಳಗಾವಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ನಿರ್ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)–ಬಜರಂಗ ದಳ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿನ ಖಡೇಬಜಾರ್ ಮಾರುತಿ ಮಂದಿರದ ಬಳಿ ಬುಧವಾರ ಸಂಭ್ರಮ ಆಚರಿಸಿದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಪಟಾಕಿಗಳನ್ನು ಸಿಡಿಸಿ, ನೆರೆದಿದ್ದವರಿಗೆ ಸಿಹಿ ಹಂಚಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಎಚ್‌ಪಿ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೃಷ್ಣ ಭಟ್, ‘ಹಿಂದೂ ಸಮಾಜಕ್ಕೆ ನ್ಯಾಯ ಸಿಕ್ಕಿದೆ. ಈ ಹೋರಾಟದಲ್ಲಿ ಲಕ್ಷಾಂತರ ಕರಸೇವಕರು ಬಲಿದಾನ ಮಾಡಿದ್ದಾರೆ. ನಮ್ಮ ಸಮಾಜ ಈಗ ಬಲಿಷ್ಠವಾಗಿದೆ. ಸಂತೋಷ ನೀಡುವಂತಹ ತೀರ್ಪನ್ನು ನ್ಯಾಯಾಲಯ ನೀಡಿದೆ. ಸ್ವಾಗತಾರ್ಹ ನ್ಯಾಯ ನಿರ್ಣಯ ಇದಾಗಿದೆ’ ಎಂದು ಹೇಳಿದರು.

ADVERTISEMENT

ಮುಖಂಡ ಬಸವರಾಜ ಭಾಗೋಜಿ, ‘ಸತ್ಯಮೇವ ಜಯತೇ ಎನ್ನುವುದು ನ್ಯಾಯಾಲಯದ ತೀರ್ಪಿನಿಂದಾಗಿ ಸಾಬೀತಾಗಿದೆ. ಎಲ್ಲರಿಗೂ ಖುಷಿ ತರುವ ಬೆಳವಣಿಗೆ ಇದಾಗಿದೆ’ ಎಂದರು.

ಕಾರ್ಯಕರ್ತರಾದ ವಿಜಯ ಜಾಧವ್, ಆನಂದ ಕರಲಿಂಗಣ್ಣವರ, ಸತೀಶ ಮಾಳೋದೆ, ರವಿ ಕಲಘಟಗಿ, ಬಸವರಾಜ ಗಾಣಗಿ, ಹೇಮಂತ ಹಾವಳ, ಅರ್ಜುನ ರಜಪೂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.