ADVERTISEMENT

ಬೈಲಹೊಂಗಲ: ತಾಲ್ಲೂಕು ಪಂಚಾಯಿತಿ ಕಚೇರಿಗೆ ಕರವೇ ಕಾರ್ಯಕರ್ತರ ಮುತ್ತಿಗೆ

ತಾಲ್ಲೂಕು ಪಂಚಾಯಿತಿ ಕಚೇರಿಗೆ ಕರವೇ ಕಾರ್ಯಕರ್ತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:57 IST
Last Updated 26 ಸೆಪ್ಟೆಂಬರ್ 2025, 2:57 IST
ಬೈಲಹೊಂಗಲ ತಾಲ್ಲೂಕು ಪಂಚಾಯಿತಿ ಎದುರು ಕರವೇಯಿಂದ ಗುರುವಾರ ಇ.ಒ. ಸಂಜೀವಕುಮಾರ ಜಿನ್ನೂರ, ಸಿಪಿಐ ಪ್ರಮೋದ ಯಲಿಗಾರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು
ಬೈಲಹೊಂಗಲ ತಾಲ್ಲೂಕು ಪಂಚಾಯಿತಿ ಎದುರು ಕರವೇಯಿಂದ ಗುರುವಾರ ಇ.ಒ. ಸಂಜೀವಕುಮಾರ ಜಿನ್ನೂರ, ಸಿಪಿಐ ಪ್ರಮೋದ ಯಲಿಗಾರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು   

ಬೈಲಹೊಂಗಲ: ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲಿ ಗ್ರಾಮದೇವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ವೇದಿಕೆಯ ಬೆಳಗಾವಿ ಜಿಲ್ಲಾ ಘಟಕ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ಗ್ರಾಮ ಪಂಚಾಯಿತಿ ನಕಾಶೆ ಪ್ರಕಾರ ಸಂಘದ ಹೆಸರಿಗೆ ಜಾಗ ಠರಾವಾಗಿದೆ. ಇ–ಸ್ವತ್ತು, ಉತಾರ ಸಹ ಆಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಕಾಮಗಾರಿ ಸ್ಥಗಿತಗೊಳಿಸಲು ನ್ಯಾಯಾಲಯ ಆದೇಶ ನೀಡಿದೆ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಇಒ ಹೇಳುತ್ತಿದ್ದಾರೆ’ ಎಂದು ಹೇಳಿದರು.

‘ಯಾರದೋ ಒತ್ತಡಕ್ಕೆ ಮಣಿದು ಕಟ್ಟಡ ನಿರ್ಮಾಣಕ್ಕೆ ಅಡಚಣೆ ಮಾಡುತ್ತಿರುವುದು ಸರಿಯಲ್ಲ. ಇಂತಹ ಧೋರಣೆ ಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

ADVERTISEMENT

ತಾ.ಪಂ. ಇಒ ಸಂಜೀವಕುಮಾರ ಜಿನ್ನೂರ, ಸಿಪಿಐ ಪ್ರಮೋದ ಯಲಿಗಾರ ಮನವಿ ಸ್ವೀಕರಿಸಿದರು.  ತಾಲ್ಲೂಕು ಘಟಕದ ಅಧ್ಯಕ್ಷ ವಿಠ್ಠಲ ಕಡಕೋಳ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ಕುಶಾಲ್ ತಾಂಜೇಕರ, ಸಂಚಾಲಕ ಸುಧೀರಗೌಡ ಪಾಟೀಲ, ಮಡಿವಾಳ ಪೂಜೇರಿ, ಮಣಿಕಂಠ ಮತ್ತಿಕೊಪ್ಪ, ಅಭಿಷೇಕ ಬನ್ನೂರ, ಮಲ್ಲಿಕಾರ್ಜುನ ಭರಮಣ್ಣವರ, ಅಕ್ಷಯ ಪೂಜೇರಿ, ಪ್ರಕಾಶ ತಿಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.