ಬೈಲಹೊಂಗಲ (ಬೆಳಗಾವಿ): ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಎದುರು ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ತಳ್ಳುವ ಗಾಡಿಗಳನ್ನು ಪುರಸಭೆ ಸಿಬ್ಬಂದಿ ಬುಧವಾರ ತಡರಾತ್ರಿಯೇ ತೆರವೂಗೊಳಿಸಿದರು. ಇದರಿಂದ ಆಕ್ರೋಶಗೊಂಡ ವ್ಯಾಪಾರಿಗಳು ರಾತ್ರಿ ರಸ್ತೆಗಿಳಿದು ದಿಢೀರ್ ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣದ ಮುಖ್ಯ ರಸ್ತೆಯ ಎರಡು ಬದಿ ತಳ್ಳುವ ಗಾಡಿಗಳನ್ನು ಅಡ್ಡ ನಿಲ್ಲಿಸಿ ಪುರಸಭೆ ವಿರುದ್ಧ ಘೋಷಣೆ ಕೂಗಿದರು. ಬೀದಿ ಬದಿಯ ಬಡ ವ್ಯಾಪಾರಸ್ಥರಿಗೆ ಯಾವುದೇ ನೋಟೀಸ್ ನೀಡದೆ ಏಕಾಏಕಿ ಬಂದು ಗಾಡಿಗಳನ್ನು ಇತ್ತಿಕೊಂಡು ಹೋಗಿದ್ದು ಅನ್ಯಾಯ. ಇದನ್ನು ಪ್ರಶ್ನಿಸಿದ ವ್ಯಾಪಾರಿಗಳ ಮೇಲೆ ಪುರಸಭೆ ಸಿಬ್ಬಂದಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಪುರಸಭೆ ಸಿಬ್ಬಂದಿ ದೌರ್ಜನ್ಯಕ್ಕೆ ಧಿಕ್ಕಾರ. ನ್ಯಾಯ ಸಿಗುವವರೆಗೆ ಹೋರಾಟ ಬಿಡುವುದಿಲ್ಲ ಎಂದು ಘೋಷಣೆ ಮೊಳಗಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾ ನಿರತರ ಮನ ಒಲಿಸಲು ಯತ್ನಿಸಿದರು. ಪೊಲೀಸರು ಪುರಸಭೆ ಮುಖ್ಯಾಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಪುರಸಭೆ ಆಡಳಿತ ವ್ಯವಸ್ಥೆಗೆ, ಸದಸ್ಯರ ವಿರುದ್ಧ ಮತ್ತಷ್ಟು ಅಸಮಾಧಾನ ಹೊರ ಹಾಕಿದರು. ಈ ವೇಳೆ ಕೆಲಕಾಲ ಉದಿಗ್ನ ವಾತಾವರಣ ನಿರ್ಮಾಣವಾಯಿತು.
'ಬಡ ವ್ಯಾಪಾರಸ್ಥರ ಮೇಲೆ ಪುರಸಭೆ ಸಿಬ್ಬಂದಿ ಕಿರುಕುಳ ನೀಡಿ ದೌರ್ಜನ್ಯ ಎಸಗುತ್ತಿದ್ದಾರೆ. ಯಾರಿಗೂ ಯಾವುದೇ ನೋಟಿಸ್ ನೀಡದೆ ಗಾಡಿಗಳನ್ನು ತೆರುವುಗೊಳಿಸುತ್ತಿರುವುದು ಅನ್ಯಾಯ. ಮಧ್ಯರಾತ್ರಿಯವರೆಗೂ ತೆರೆದುಕೊಂಡಿರುವ ಬಾರ್, ರೆಸ್ಟೋರೆಂಟ್ ವ್ಯಾಪಾರಸ್ಥರಿಗೆ ಇಲ್ಲದ ನಿಯಮ ಬೀದಿ ಬದಿಯ ವ್ಯಾಪಾರಸ್ಥರಿಗೆ ಏಕೆ? ಪ್ಲಾಸ್ಟಿಕ್ ಮುಕ್ತ ಪುರಸಭೆ ಎನ್ನುವವರು ಪುರಸಭೆಯಲ್ಲಿಯೇ ಎಲ್ಲದಕ್ಕೂ ಪ್ಲಾಸ್ಟಿಕ್ ಬಳಸುತ್ತಿದೆ' ಎಂದು ಮುಖಂಡರಾದ ಯುವ ಮುಖಂಡ ಶಿವು ಕುರುಬೇಟ, ಆನಂದ ಕಾಜಗಾರ ದೂರಿದರು.
'ತೆಗೆದುಕೊಂಡು ಹೋಗಿರುವ ತಳ್ಳುವ ಗಾಡಿಗಳನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ನೀಡಬೇಕು. ದುಡಿದು ತಿನ್ನುವ ಬಡ ವ್ಯಾಪಾರಸ್ಥರಿಗೆ ವಿನಾಕಾರಣ ಕಿರುಕುಳ ನೀಡಬಾರದು. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.