ADVERTISEMENT

ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ: ಬಾಲಾಚಾರ್ಯ ಸಿದ್ದಸೇನ ಮುನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 15:41 IST
Last Updated 3 ಆಗಸ್ಟ್ 2023, 15:41 IST
ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ
ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ   

ಬೆಳಗಾವಿ: ‘ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸಲು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಕೆಲವರು ಹುನ್ನಾರ ನಡೆಸಿದ್ದು, ಇದು ಒಳ್ಳೆಯದಲ್ಲ’ ಎಂದು ತಾಲ್ಲೂಕಿನ ಹಲಗಾ– ಬಸ್ತವಾಡ ಜೈನ ಆಶ್ರಮದ ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ ತಿಳಿಸಿದರು.

‘ಕೊಲೆ ಪ್ರಕರಣ ಮುಂದಿಟ್ಟುಕೊಂಡು, ಅನಗತ್ಯವಾಗಿ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಧರ್ಮಸ್ಥಳವು ವಿಶ್ವ ಪ್ರಸಿದ್ಧ ಶ್ರದ್ಧಾ ಕೇಂದ್ರ. ಕೋಟ್ಯಂತರ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ. ಜಾತಿ- ಧರ್ಮ ಮೀರಿದ ಸ್ಥಳವಿದು. ಇಂಥ ಕ್ಷೇತ್ರದ ಹೆಸರು ಕೆಡಿಸುವ ಕೆಲಸ ಯಾರೂ ಮಾಡಬಾರದು. ಕಾಣದ ಕೈಗಳು ಈ ಷಡ್ಯಂತ್ರ ನಡೆಸುತ್ತಿವೆ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಮುತುವರ್ಜಿ ವಹಿಸಬೇಕು. ಅಲ್ಲದೇ, ಧರ್ಮಸ್ಥಳದ ಹೆಸರು ಹಾಳು ಮಾಡಲು ಹೊರಟವರ ಮೇಲೂ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಧರ್ಮ ಕ್ಷೇತ್ರಗಳ ಮೇಲೆ ಈ ರೀತಿಯ ಆರೋಪ ಇದೇ ಮೊದಲಲ್ಲ. ಅನಾದಿ ಕಾಲದಿಂದಲೂ ಷಡ್ಯಂತ್ರ ಮುಂದುವರಿದು ಬಂದಿದೆ. ರಾಮನ ಕಾಲದಲ್ಲಿದ್ದ ರಾವಣ, ಪಾಂಡವರ ಕಾಲದಲ್ಲಿದ್ದ ಕೌರವರಂತೆ ಈಗಲೂ ಧರ್ಮ ಕಂಟಕರು ಇದ್ದಾರೆ. ಆದರೆ, ಕೊನೆಗೆ ಧರ್ಮ– ಸತ್ಯಗಳೇ ಗೆಲ್ಲುತ್ತವೆ. ಧರ್ಮದ ಹಾದಿಯಲ್ಲಿ ಹೊರಟವರಿಗೆ ಇಂಥ ಅಡ್ಡಿಗಳು ಸಾಮಾನ್ಯ’ ಎಂದು ಅವರು ತಿಳಿಸಿದರು.

ಜೈನ ಮುನಿ ಹತ್ಯೆ: ನ್ಯಾಯ ಸಿಗುವ ವಿಶ್ವಾಸ ‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈ ಕೃತ್ಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ ಹೇಳಿದರು. ‘ಮುನಿಶ್ರೀ ಹತ್ಯೆ ಖಂಡಿಸಿ ದೇಶದಾದ್ಯಂತ ಹೋರಾಟಗಳು ನಡೆದಿವೆ. ಒಂದು ಕ್ರಿಮಿಗೂ ಹಿಂಸೆ ಬಯಸದವರು ಮುನಿಗಳು. ಅಂಥವರ ಹತ್ಯೆ ಸಂತ ಸಂಕುಲವನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಗೃಹ ಸಚಿವ ಡಾ.ಪರಮೇಶ್ವರ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.